ಪಟನಾ: ಸಂಯುಕ್ತ ಜನತಾ ದಳ (JDU) ನಾಯಕ ಉಪೇಂದ್ರ ಕುಶ್ವಾಹ (Upendra Kushwaha) ಅವರು ಸೋಮವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರೀಯ ಲೋಕ ಜನತಾದಳ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ. ಶಾಸಕರಾಗಿ, ಸಂಸದರಾಗಿ, ಕೇಂದ್ರ ಸಚಿವರಾಗಿ ರಾಜಕೀಯದಲ್ಲಿ ಅಪಾರ ಅನುಭವವಿರುವ ಉಪೇಂದ್ರ ಕುಶ್ವಾಹ ಅವರು ೨೦೨೫ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಪಕ್ಷ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.
“ನಾನು ಜೆಡಿಯು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಹಾಗೆಯೇ, ರಾಷ್ಟ್ರೀಯ ಲೋಕ ಜನತಾದಳ ಪಕ್ಷ ಸ್ಥಾಪನೆಗೆ ನಿರ್ಧರಿಸಲಾಗಿದೆ. ನಾನು ಇದರ ರಾಷ್ಟ್ರೀಯ ಅಧ್ಯಕ್ಷನಾಗಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರ ಹಿತಾಸಕ್ತಿ ಕಾಪಾಡಲು ಕಾರ್ಯನಿರ್ವಹಿಸಲಾಗುತ್ತದೆ. ಕರ್ಪೂರಿ ಠಾಕೂರ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ” ಎಂದು ಹೇಳಿದರು.
ಸದ್ಯ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದು, ಇದಕ್ಕೂ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪೇಂದ್ರ ಕುಶ್ವಾಹ ಅವರ ಮಧ್ಯೆ ಬಿರುಕು ಮೂಡಿದ್ದೇ ಕುಶ್ವಾಹ ಅವರು ಪಕ್ಷ ತೊರೆಯಲು ಕಾರಣ ಎನ್ನಲಾಗಿದೆ. ”ಬಿಹಾರ ಜನತೆಯ ಹಿತದೃಷ್ಟಿಯಿಂದ ನಿತೀಶ್ ಕುಮಾರ್ ಅವರು ಕಾರ್ಯನಿರ್ವಹಿಸುತ್ತಿಲ್ಲ” ಎಂದು ಸುದ್ದಿಗೋಷ್ಠಿಯಲ್ಲಿ ಕುಶ್ವಾಹ ಅವರು ಹೇಳಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದಕ್ಕೂ ಮೊದಲು ಕುಶ್ವಾಹ ಅವರು ರಾಷ್ಟ್ರೀಯ ಲೋಕ ಸಮತಾ ಪಕ್ಷದಲ್ಲಿದ್ದರು. ಇವರು ೨೦೧೪ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಹಾಯಕ ಸಚಿವರಾಗಿದ್ದರು.
ಇದನ್ನೂ ಓದಿ: Ramcharitmanas Row | ಬಿಹಾರದಲ್ಲಿ ಆರ್ಜೆಡಿ-ಜೆಡಿಯು ಮಧ್ಯೆ ಬಿರುಕು ಮೂಡಿಸಿದ ರಾಮಚರಿತಮಾನಸ ವಿವಾದ