Site icon Vistara News

Manoj Soni: ಅಕ್ರಮ ಆರೋಪದ ಬೆನ್ನಲ್ಲೇ ಯುಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಮನೋಜ್‌ ಸೋನಿ ರಾಜೀನಾಮೆ

Manoj Soni

UPSC Chairman Manoj Soni submits resignation citing personal reasons

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ನೀಟ್‌ ಯುಜಿ (NEET UG 2024) ಪರೀಕ್ಷೆಯ ಅಕ್ರಮ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿರುವ ಬೆನ್ನಲ್ಲೇ, ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್‌ ಅವರು ನಕಲಿ ದಾಖಲೆ ಸೃಷ್ಟಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕೂಡ ಅಷ್ಟೇ ಸದ್ದು ಮಾಡುತ್ತಿದೆ. ಇದರಿಂದಾಗಿ ಕೇಂದ್ರ ಲೋಕಸೇವಾ ಆಯೋಗದ (UPSC) ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಯುಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಮನೋಜ್‌ ಸೋನಿ (Manoj Soni) ರಾಜೀನಾಮೆ ನೀಡಿದ್ದಾರೆ.

ಮನೋಜ್‌ ಸೋನಿ ಅವರು ರಾಜೀನಾಮೆ ಸಲ್ಲಿಸಿದ್ದು, ಇದುವರೆಗೆ ಅವರ ರಾಜೀನಾಮೆಯನ್ನು ಅಂಗೀಕಾರ ಆಗಿಲ್ಲ ಎಂಬುದಾಗಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮೂಲಗಳು ತಿಳಿಸಿವೆ ಎಂಬುದಾಗಿ ಎಎನ್‌ಐ ಸುದ್ದಿಸಂಸ್ಥೆಯು ತಿಳಿಸಿದೆ. 2023ರ ಮೇ 16ರಂದು ಯುಪಿಎಸ್‌ಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಮನೋಜ್‌ ಸೋನಿ ಅವರ ಅಧಿಕಾರದ ಅವಧಿಯು 2029ರವರೆಗೆ ಇದೆ. 2017ರಿಂದಲೂ ಇವರು ಯುಪಿಎಸ್‌ಸಿ ಸದಸ್ಯರೂ ಆಗಿದ್ದರು. ಈಗ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದಾರೆ.

ಮನೋಜ್‌ ಸೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರೂ ಆಗಿದ್ದಾರೆ. ಮೋದಿ ಅವರು ಗುಜರಾತ್‌ ಸಿಎಂ ಆಗಿದ್ದಾಗ ವಡೋದರಾದಲ್ಲಿರುವ ಎಂಎಸ್‌ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮನೋಜ್‌ ಸೋನಿ ಅವರನ್ನು ನೇಮಿಸಲಾಗಿತ್ತು. ಆಗ ಮನೋಜ್‌ ಸೋನಿ ಅವರಿಗೆ 40 ವರ್ಷ ವಯಸ್ಸು. ಆ ಮೂಲಕ ಅವರು ದೇಶದ ಅತಿ ಕಿರಿಯ ವಯಸ್ಸಿನ ಕುಲಪತಿ ಎಂಬ ಖ್ಯಾತಿಗೂ ಭಾಜನರಾಗಿದ್ದರು. ಕಳೆದ ತಿಂಗಳೇ ಮನೋಜ್‌ ಸೋನಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್‌ ಅವರ ಕಳ್ಳಾಟಗಳು ಬಗೆದಷ್ಟೂ ಹೊರ ಬರುತ್ತಿವೆ. ಅವರು ಅಂಗವೈಕಲ್ಯ ಪ್ರಮಾಣಪತ್ರ ವನ್ನು ಪಡೆಯಲು ಸುಳ್ಳು ವಿಳಾಸ ಮತ್ತು ನಕಲಿ ಪಡಿತರ ಚೀಟಿಯನ್ನು ಬಳಸಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಯಪಿಎಸ್‌ಸಿಯು ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಆದರೆ, ಯುಪಿಎಸ್‌ಸಿ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರ ಹಿನ್ನೆಲೆಯಲ್ಲಿಯೇ ಮನೋಜ್‌ ಸೋನಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: NEET UG 2024 Result: ಕ್ಷೇತ್ರವಾರು ನೀಟ್‌ ಪರೀಕ್ಷಾ ಫಲಿತಾಂಶ ಪ್ರಕಟ

Exit mobile version