ಹೈದರಾಬಾದ್: ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ (UPSC Results 2023) ಪ್ರಕಟವಾಗಿದೆ. ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ್ (Aditya Srivastava) ಅವರು ಮೊದಲ ರ‍್ಯಾಂಕ್ ಗಳಿಸಿದ್ದಾರೆ. ಇನ್ನು, ತೆಲಂಗಾಣದ ಡೋನೂರು ಅನನ್ಯಾ ರೆಡ್ಡಿ (Donuru Ananya Reddy) ಅವರು ದೇಶಕ್ಕೇ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯವರಾದ ಡೋನೂರು ಅನನ್ಯಾ ರೆಡ್ಡಿ ಅವರು ಕೋಚಿಂಗ್ ತರಬೇತಿ ಇಲ್ಲದೆಯೇ ಅಧ್ಯಯನ ಮಾಡಿ ಇಂತಹ ಸಾಧನೆಗೈದಿದ್ದಾರೆ. ಹಾಗಾದರೆ, ಇವು ಐಎಎಸ್‌ಗೆ ಹೇಗೆ ಅಧ್ಯಯನ ಮಾಡುತ್ತಿದ್ದರು? ಇವರ ಸ್ಟ್ರ್ಯಾಟಜಿ ಏನಾಗಿತ್ತು ಎಂಬುದರ ಮಾಹಿತಿ ಇಲ್ಲಿದೆ.
ಮೆಹಬೂಬ್‌ನಗರ ಜಿಲ್ಲೆಯವರಾದ ಅನನ್ಯಾ ರೆಡ್ಡಿ ಅವರು ದೆಹಲಿ ವಿಶ್ವವಿದ್ಯಾಲಯದ ಮಿರಿಂಡ ಹೌಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ಇವರು ಮಕ್ಕಳಿಗೆ ಕಲಿಸುವುದರಲ್ಲಿ ಖುಷಿ ಕಂಡವರು. ಪದವಿ ನಂತರ ಕಷ್ಟಪಟ್ಟು ಓದಿದ ಇವರು ಯಾವುದೇ ತರಬೇತಿ ಇಲ್ಲದೆಯೇ ಯುಪಿಎಸ್‌ಸಿಯಲ್ಲಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಮಾನವಶಾಸ್ತ್ರ ವಿಷಯದ ಕುರಿತು ಮಾತ್ರ ಇವರು ತರಬೇತಿ ಪಡೆದಿದ್ದು ಬಿಟ್ಟರೆ, ಉಳಿದ ತಯಾರಿಯನ್ನು ಅವರೇ ಮಾಡಿಕೊಂಡು, ಸತತ ಪರಿಶ್ರಮದ ಮೂಲಕ ಸಾಧನೆಯ ಮೆಟ್ಟಿಲು ಹತ್ತಿದ್ದಾರೆ.
Clip from mock Interview of UPSC CSE 2023
— All PYQ Dot Com (@allpyq) April 16, 2024
AIR 3 – DONURU ANANYA REDDY
Credits – Unacademy#UPSC #UPSCresult #Upsc2023 सिविल सेवा pic.twitter.com/SJmAPjnJfd
ದೇಶಕ್ಕೇ ತೃತೀಯ ರ‍್ಯಾಂಕ್ ಪಡೆದ ಕುರಿತು ಅನನ್ಯಾ ರೆಡ್ಡಿ ಮಾಹಿತಿ ನೀಡಿದ್ದಾರೆ. “ನಾನು ಯಾವುದೇ ಕೋಚಿಂಗ್ ಸಂಸ್ಥೆಗಳಲ್ಲಿ ತರಬೇತಿ ಪಡೆದಿಲ್ಲ. ನಿತ್ಯ 12-14 ತಾಸು ಕಡ್ಡಾಯವಾಗಿ ಅಧ್ಯಯನ ಮಾಡುತ್ತಿದ್ದೆ. ನಾನು ಚಿಕ್ಕವಳಿದ್ದಾಗಲೇ ಸಮಾಜಕ್ಕೆ ನನ್ನಿಂದಾದ ಸೇವೆ ಮಾಡಬೇಕು ಎಂದು ಬಯಸಿದ್ದೆ. ಶಾಲೆಯಲ್ಲಿದ್ದಾಗಲೇ ಈ ದಿಸೆಯಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುಖ್ಯ ಪರೀಕ್ಷೆ, ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದೆ. ಆದರೆ, ಮೂರನೇ ರ‍್ಯಾಂಕ್ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ” ಎಂಬುದಾಗಿ ಅನನ್ಯಾ ರೆಡ್ಡಿ ತಿಳಿಸಿದ್ದಾರೆ.
ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ಆದಿತ್ಯ ಶ್ರೀವಾಸ್ತವ್ ಅವರು ಉತ್ತರ ಪ್ರದೇಶದ ಲಖನೌ ಮೂಲದವರು. ಇವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಲಖನೌನಲ್ಲಿಯೇ ಮುಗಿಸಿದ್ದಾರೆ. ಐಐಟಿ ಕಾನ್ಪುರದಲ್ಲಿ ಎಂ.ಟೆಕ್ ಸ್ನಾತಕೋತ್ತರ ಪದವಿ ಪಡೆದ ಇವರು 15 ತಿಂಗಳು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆದರೆ, ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತ ಇವರು ಎಲೆಕ್ಟ್ರಿಕಲ್ ಎಂಜಿನಿಯರ್ ಉದ್ಯೋಗ ಬಿಟ್ಟು ಐಎಎಸ್‌ಗೆ ಅಧ್ಯಯನ ಮಾಡಲು ಆರಂಭಿಸಿದರು. ಈಗ ಇವರು ಯಶಸ್ಸು ಸಾಧಿಸಿದ್ದಾರೆ.
ಇದನ್ನೂ ಓದಿ: UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್ ರ‍್ಯಾಂಕ್; ಯಾರಿವರು?