ಲಖನೌ: ಉತ್ತರ ಪ್ರದೇಶದಲ್ಲಿ ಇನ್ನೊಂದು ಅಮಾನವೀಯ ಕೃತ್ಯ ನಡೆದಿದೆ. ಮೂವರು ಮಂಗಳಮುಖಿಯರು ಸೇರಿ ಐವರು ವ್ಯಕ್ತಿಯೊಬ್ಬನ ತಲೆ ಬೋಳಿಸಿ ಮೂತ್ರ ಕುಡಿಸಿರುವುದು (Urination Case) ವರದಿಯಾಗಿದೆ.
ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ವ್ಯಕ್ತಿಯ ತಲೆ ಬೋಳಿಸಿ ಮೂತ್ರ ಕುಡಿಸಿದ ಆರೋಪದ ಮೇಲೆ ಮೂವರು ಮಂಗಳಮುಖಿಯರು ಸೇರಿ ಐವರನ್ನು ಬಂಧಿಸಲಾಗಿದೆ. ಸಹವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಘಟನೆ ನಡೆದಿದೆ. ಇದರ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಸಂತ್ರಸ್ತ ರಫೀಕುಲ್ ಎಂಬವರು ದೂರು ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗಿದೆ.
ಮಂಗಳಮುಖಿಯೊಬ್ಬನ ಮನೆಯಲ್ಲಿ ರಫೀಕುಲ್ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ. ಮಾಲೀಕ ಹಾಗೂ ಅವರ ಇಬ್ಬರು ಸಹಾಯಕರೊಂದಿಗೆ ತಗಾದೆ ಸೃಷ್ಟಿಯಾದ ಬಳಿಕ ರಫೀಕುಲ್ ಮೇಲೆ ಈ ಅಮಾನವೀಯ ಹಲ್ಲೆ ನಡೆದಿದೆ. ಆರೋಪಿಗಳು ಸಂತ್ರಸ್ತ ವ್ಯಕ್ತಿಯನ್ನು ಥಳಿಸಿ ₹10,000 ನಗದು ಕೂಡ ದೋಚಿದ್ದಾರೆ. ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ, ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಪ್ರವೇಶ್ ಶುಕ್ಲಾ ಎಂಬವನನ್ನು ಬಂಧಿಸಿ ಕಠಿಣ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಆತನ ಮನೆಯನ್ನೂ ಕೆಡವಲಾಗಿದೆ.
ಇದನ್ನೂ ಓದಿ: ಬಾಲಕಿಯನ್ನು ಪ್ರೀತಿಸುತ್ತಿದ್ದ ದಲಿತ ವ್ಯಕ್ತಿಗೆ ಥಳಿತ; ಆತನ ಮೇಲೆ ಮೂತ್ರ ವಿಸರ್ಜಿಸಿದ ಒಂಬತ್ತು ದುರುಳರು