Site icon Vistara News

ಮಣಿಪುರ ಹಿಂಸಾಚಾರ; ನಿಯಂತ್ರಣಕ್ಕೆ ಸಹಾಯದ ಆಫರ್​ ಕೊಟ್ಟ ಅಮೆರಿಕ

Manipur violence

ಮಣಿಪುರದಲ್ಲಿ ಹಿಂಸಾಚಾರ (Manipur violence) ದಿನೇದಿನೆ ಮಿತಿಮೀರುತ್ತಿದೆ. ಗಲಭೆಕೋರರನ್ನು ನಿಯಂತ್ರಿಸಲು ಭಾರತೀಯ ಸೇನೆ, ಇನ್ನಿತರ ರಕ್ಷಣಾ ಸಿಬ್ಬಂದಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಹಿಂಸಾಚಾರ ಮಾಡುತ್ತಿರುವವರನ್ನು ನಿಯಂತ್ರಿಸಲು ಹಿಮ್ಮೆಟ್ಟಿಸಲಾಗುತ್ತಿದ್ದರೂ, ಒಂದಲ್ಲ ಒಂದು ಕಡೆಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಪ್ರತಿಭಟನಾಕಾರರು ಮನೆಮನೆಗಳಿಗೆ ಬೆಂಕಿಯಿಡುತ್ತಿದ್ದಾರೆ. ಮಣಿಪುರದಲ್ಲಿ ಪರಿಸ್ಥಿತಿ ಹೀಗಿರುವಾಗ, ಅಮೆರಿಕ ಸಹಾಯದ ಆಫರ್​ ಕೊಟ್ಟಿದೆ. ‘ಮಣಿಪುರ ಹಿಂಸಾಚಾರದ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡಲು ಯುಎಸ್ ಸಿದ್ಧವಿದೆ. ಮಾನವೀಯತೆ ದೃಷ್ಟಿಯಿಂದ ನೆರವಿಗೆ ಮುಂದಾಗಿದ್ದೇವೆ. ಶಾಂತಿ ಸ್ಥಾಪನೆಯೇ ನಮ್ಮ ಮುಖ್ಯ ಗುರಿಯಾಗಿದ್ದು, ಇದಕ್ಕಾಗಿ ಹೆಚ್ಚೆಚ್ಚು ಹೂಡಿಕೆ ಮಾಡಲು ಸಿದ್ಧವಿದ್ದೇವೆ’ ಎಂದು ಯುಎಸ್​​ನ ಭಾರತದ ರಾಯಭಾರಿ ಎರಿಕ್ ಗಾರ್ಸೆಟ್ಟಿ (US Ambassador to India Eric Garcetti) ತಿಳಿಸಿದ್ದಾರೆ.

ಮಣಿಪುರದಲ್ಲಿ ಮೈತೈ ಮತ್ತು ಕುಕಿ ಸಮುದಾಯಗಳ ಮಧ್ಯೆ ಶುರುವಾದ ಸಂಘರ್ಷದ ಕಿಚ್ಚು ಇಡೀ ಮಣಿಪುರವನ್ನು ಸುಡುತ್ತಿದೆ. ಮೈತೈಗಳು ತಮಗೆ ಎಸ್​ಟಿ (ಪರಿಶಿಷ್ಟ ಪಂಗಡ) ಸ್ಥಾನಮಾನ ಬೇಕು ಎಂದು ಆಗ್ರಹ ಮಾಡುತ್ತಿದ್ದರೆ, ‘ಅವರಿಗೆ’ ಯಾವ ಕಾರಣಕ್ಕೂ ಎಸ್​ಟಿ ಸ್ಥಾನಮಾನ ನೀಡಬಾರದು ಎಂದು ಕುಕಿಗಳು ಪಟ್ಟು ಹಿಡಿದಿದ್ದಾರೆ. ಆದರೆ ಈಗೀಗ ನೈಜ ಕಾರಣವೇ ಮರೆಮಾಚಿದಂತಾಗಿದೆ. ಇಡೀ ಮಣಿಪುರ ಪೂರ್ತಿ ನಲುಗುತ್ತಿದೆ. ಅನೇಕರ ಸಾವಾಗಿದೆ. 300ಕ್ಕೂ ಹೆಚ್ಚು ಮಂದಿ ಅರೆಸ್ಟ್ ಆಗಿದ್ದಾರೆ. ಗುರುವಾರ ಮಣಿಪುರದ ಇಂಫಾಲ್​​ನಲ್ಲಿ ಶಾಲೆಯೊಂದರ ಹೊರಗೆ ಮಹಿಳೆಯೊಬ್ಬರನ್ನು ಶೂಟ್ ಮಾಡಿ ಕೊಲ್ಲಲಾಗಿದೆ. ಶಾಲೆ ಮರು ಆರಂಭವಾಗಿ ಮರುದಿನವೇ ಈ ಘಟನೆ ನಡೆದಿದೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ; ಶಸ್ತ್ರಾಸ್ತ್ರ ಲೂಟಿ ಮಾಡಲು ಯತ್ನಿಸಿದ ಗಲಭೆಕೋರರನ್ನು ಓಡಿಸಿದ ಸೇನೆ, ಒಬ್ಬನ ಹತ್ಯೆ

ಮಣಿಪುರದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಯುಎಸ್​ನ ಭಾರತದ ರಾಯಭಾರಿ ಎರಿಕ್ ಗಾರ್ಸೆಟ್ಟಿ ‘ಮಣಿಪುರ ಹಿಂಸಾಚಾರದಲ್ಲಿ ಮಕ್ಕಳೆಲ್ಲ ಸಾಯುತ್ತಿದ್ದಾರೆ. ತೀವ್ರವಾಗಿ ಸಂಕಷ್ಟದಿಂದ ನಲುಗಿರುವ ಮಣಿಪುರದ ಬಗ್ಗೆ ಕಾಳಜಿ ವ್ಯಕ್ತಪಡಿಸಲು, ಅಲ್ಲಿಗೆ ನೆರವಿಗೆ ಧಾವಿಸಬೇಕು ಎಂದರೆ ಭಾರತೀಯರೇ ಆಗಬೇಕು ಎಂದೇನೂ ಇಲ್ಲ’ ಎಂದಿದ್ದಾರೆ. ‘ಇದು ಸಂಪೂರ್ಣವಾಗಿ ಭಾರತಕ್ಕೆ ಸಂಬಂಧಪಟ್ಟ ವಿಷಯ ಎಂಬುದು ನಮಗೆ ಗೊತ್ತಿದೆ. ಆದರೆ ಇಲ್ಲಿ ಆದಷ್ಟು ಶೀಘ್ರದಲ್ಲೇ ಶಾಂತಿ ಸ್ಥಾಪನೆಯಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಹೀಗಾಗಿ ಏನೇ ನೆರವು ಬೇಕಾದರೂ ನಾವು (ಅಮೆರಿಕ) ನೀಡಲು ಸಿದ್ಧರಿದ್ದೇವೆ’ ಎಂದೂ ಅಮೆರಿಕ ರಾಯಭಾರಿ ಹೇಳಿದ್ದಾರೆ.

Exit mobile version