Site icon Vistara News

Deepfake: ಚುನಾವಣೆ ಗೆಲ್ಲಲು ಕಾಂಗ್ರೆಸ್‌ನಿಂದ ಡೀಪ್‌ಫೇಕ್‌ ಬಳಕೆ; ದೂರು ದಾಖಲು

Deepfake

Using deepfake to fool people; KCR's Party Files Complaint Against Congress In Telangana

ಹೈದರಾಬಾದ್:‌ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್‌, ಆಲಿಯಾ ಭಟ್‌ ಸೇರಿ ಹಲವು ನಟಿಯರ ಡೀಪ್‌ಫೇಕ್‌ ವಿಡಿಯೊಗಳು (Deepfake) ವೈರಲ್‌ ಆಗಿರುವುದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಡೀಪ್‌ಫೇಕ್‌ ತಂತ್ರಜ್ಞಾನದ ನಿಯಂತ್ರಣ, ಡೀಪ್‌ಫೇಕ್‌ ಬಳಸಿ ವಿಡಿಯೊ ಹರಿಬಿಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗುತ್ತಿದೆ. ಇದರ ಬೆನ್ನಲ್ಲೇ, ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ (Telangana Assembly Election 2023) ಕಾಂಗ್ರೆಸ್‌ ಡೀಪ್‌ಫೇಕ್‌ ಬಳಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಕಾಂಗ್ರೆಸ್‌ ಡೀಪ್‌ಫೇಕ್‌ ಬಳಸಿದೆ ಎಂದು ಬಿಆರ್‌ಎಸ್‌ ಪಕ್ಷವು ದೂರು ನೀಡಿದೆ.

“ಬಿಆರ್‌ಎಸ್‌ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ ಸೇರಿ ಬಿಆರ್‌ಎಸ್‌ ಪಕ್ಷದ ಹಲವು ನಾಯಕರ ನಕಲಿ ವಿಡಿಯೊ ಹಾಗೂ ಆಡಿಯೊಗಳನ್ನು ಪಸರಿಸಲು ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿಯು (KPCC) ಡೀಪ್‌ಫೇಕ್‌ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಇಂತಹ ಷಡ್ಯಂತ್ರ ಮಾಡಿದೆ. ಡೀಪ್‌ಫೇಕ್‌ ತಂತ್ರಜ್ಞಾನವನ್ನು ಬಳಸಿಕೊಂಡು ಜನರನ್ನು ಮೂರ್ಖರನ್ನಾಗಿಸಲು ಕಾಂಗ್ರೆಸ್‌ ಪ್ರಯತ್ನಿಸಿದೆ” ಎಂದು ಬಿಆರ್‌ಎಸ್‌ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್‌ ವಿರುದ್ಧ ಮುಖ್ಯ ಚುನಾವಣಾ ಆಯುಕ್ತ, ತೆಲಂಗಾಣ ಮುಖ್ಯ ಚುನಾವಣೆ ಅಧಿಕಾರಿ, ತೆಲಂಗಾಣ ಡಿಜಿಪಿ ಅವರಿಗೆ ಬಿಆರ್‌ಎಸ್‌ ದೂರು ನೀಡಿದೆ. ತೆಲಂಗಾಣದಲ್ಲಿ ಗುರುವಾರ (ನವೆಂಬರ್‌ 30) ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಆರ್‌ಎಸ್‌ ಮಧ್ಯೆ ತೀವ್ರ ಪೈಪೋಟಿ ಇದೆ. ಚುನಾವಣೆ ವೇಳೆ ಎರಡೂ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದವು. ಅಲ್ಲದೆ, ಮತಗಟ್ಟೆ ಸಮೀಕ್ಷೆಯಲ್ಲೂ ಎರಡೂ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಇದೆ ಎಂದೇ ಹೇಳಲಾಗಿದೆ. ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Deepfake: ಡೀಪ್‌ಫೇಕ್‌ ವಿಡಿಯೊ ಮಾಡುವವರೇ ಎಚ್ಚರ; ಕಠಿಣ ಕ್ರಮಕ್ಕೆ ಕೇಂದ್ರ ನಿರ್ಧಾರ

ಡೀಪ್‌ಫೇಕ್‌ ವಿಡಿಯೊ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ದಿಸೆಯಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಅಧಿಕಾರಿಗಳ ಜತೆ ಸಭೆ ನಡೆಸಿದೆ. “ಡೀಪ್‌ಫೇಕ್‌ ಈಗ ಸಮಾಜಕ್ಕೆ ಮಾರಕವಾಗುತ್ತಿದೆ. ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ಕ್ಷಿಪ್ರವಾಗಿ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಇದರ ದಿಸೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಡೀಪ್‌ಫೇಕ್‌ ನಿಯಂತ್ರಣದ, ಕ್ರಮ ತೆಗೆದುಕೊಳ್ಳುವುದರ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮುಂಬರುವ ಡಿಸೆಂಬರ್‌ನಲ್ಲಿ ಇದರ ಕುರಿತು ಮತ್ತಷ್ಟು ಚರ್ಚಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನೂ ಇದಕ್ಕಾಗಿ ಬಳಸಲಾಗುತ್ತದೆ” ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Exit mobile version