Site icon Vistara News

ಅಗ್ನಿಪಥ್‌ ಗಂಭೀರ ಚರ್ಚೆ ವೇಳೆ ವಕೀಲರನ್ನು ಕಿಚಾಯಿಸಿದ ನ್ಯಾಯಮೂರ್ತಿ; ಅಲ್ಲಿದ್ದವರಿಗೆಲ್ಲ ನಗು

Agnipath Scheme

ನವ ದೆಹಲಿ: ಅಗ್ನಿಪಥ್‌ ಯೋಜನೆ (Agnipath Scheme) ಯಿಂದ ಯಾವುದೇ ಪ್ರಯೋಜನವಿಲ್ಲ. ಈ ಯೋಜನೆಯಡಿ ಸೇನೆಗೆ ನೇಮಕಗೊಳ್ಳುವ ಅಗ್ನಿವೀರರ ಭವಿಷ್ಯ ನಾಲ್ಕು ವರ್ಷಗಳ ನಂತರ ಅತಂತ್ರವಾಗುತ್ತದೆ. ಹೀಗಾಗಿ ಅಗ್ನಿಪಥ್‌ ವಾಪಸ್‌ ಪಡೆಯುವಂತೆ ಕೇಂದ್ರಕ್ಕೆ ಸೂಚಿಸಿ ಎಂದು ಸುಪ್ರೀಂಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಸುಪ್ರೀಂಕೋರ್ಟ್‌ ಇಂದು ಆ ಅರ್ಜಿಗಳನ್ನೆಲ್ಲ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದೆ. ಹೀಗೆ ವರ್ಗಾವಣೆಗೂ ಮುನ್ನ ಸುಪ್ರೀಂಕೋರ್ಟ್‌ನ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ಪೀಠ ಒಂದು ಹಂತದ ವಿಚಾರಣೆ ನಡೆಸಿದೆ. ಇದರ ಗಂಭೀರ ಚರ್ಚೆ ಮಧ್ಯೆ ನ್ಯಾ. ಚಂದ್ರಚೂಡ್‌, ವಕೀಲರೊಬ್ಬರನ್ನು ಕಿಚಾಯಿಸಿದ್ದಾರೆ. ಹಾಸ್ಯ ಮಾಡಿ ಅಲ್ಲಿದ್ದವರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

ನ್ಯಾಯಮೂರ್ತಿ ಚಂದ್ರಚೂಡ್‌ ಜೋಕ್‌ ಮಾಡಿದ್ದು ವಕೀಲರಾದ ಶರ್ಮಾ ಎಂಬುವರಿಗೆ. ಈ ವಕೀಲರು ಅಗ್ನಿಪಥ್‌ ಯೋಜನೆ ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಸಲ್ಲಿಸಿದ್ದರು. ಅದನ್ನು ಸಮರ್ಥಿಸಿಕೊಳ್ಳುತ್ತ ಗಂಭೀರವಾಗಿ ವಾದ ಮಂಡಿಸುತ್ತಿದ್ದರು. ಈ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಏನೆಂದು ಪ್ರಶ್ನಿಸಿ, ತುಂಬ ಭಾವೋದ್ರೇಕದಿಂದ ಮಾತನಾಡುತ್ತಿದ್ದರು. ಇಷ್ಟೆಲ್ಲ ಹೇಳಿಯಾದ ಮೇಲೆ, ಅಗ್ನಿಪಥ್‌ನಿಂದ ನನಗೆ ವೈಯಕ್ತಿಕವಾಗಿ ಏನೂ ತೊಂದರೆಯಾಗದೆ ಇರಬಹುದು. ಆದರೆ ಇದೊಂದು ಸಾರ್ವಜನಿಕವಾಗಿ ಕಳವಳಕಾರಿ ಯೋಜನೆ ಎಂದು ಹೇಳಿದರು. ಅದೇ ಹೊತ್ತಲ್ಲಿ ಮುಗುಳ್ನಗುತ್ತ ಸಣ್ಣದಾಗಿ ಪ್ರತಿಕ್ರಿಯೆ ನೀಡಿದ ನ್ಯಾ.ಚಂದ್ರಚೂಡ್‌ ʼನೀವು ವೀರ್‌ ಆಗಬಹುದು, ಆದರೆ ʼಅಗ್ನಿವೀರ್‌ʼ ಆಗಲಿಕ್ಕಿಲ್ಲ ಅಲ್ಲವೇʼ ಎಂದು ಪ್ರಶ್ನಿಸಿದರು. ಆ ಸಮಯಕ್ಕೆ ತಕ್ಕದಾಗಿ ಚಂದ್ರಚೂಡ್‌ ಆಡಿದ ಮಾತು ಸಹಜವಾಗಿಯೇ ಎಲ್ಲರಲ್ಲೂ ನಗು ತರಿಸಿದೆ.

ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಶರ್ಮಾ, ʼಅಗ್ನಿಪಥ್‌ ಬಗ್ಗೆ ಮೊದಲು ಕಳವಳ ವ್ಯಕ್ತಪಡಿಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವನೇ ನಾನು. ಈ ವಿಚಾರದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್‌ ಅವರಿಗೆ ನನ್ನ ಪರಿಶ್ರಮ ಇಷ್ಟವಾಯಿತು. ಹಾಗಾಗಿಯೇ ಈ ಮಾತುಗಳನ್ನಾಡಿದ್ದಾರೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಗ್ನಿಪಥ್‌ಗೆ ಮತ್ತೊಂದು ಅಪವಾದ; ಜಾತಿ-ಧರ್ಮದ ಸರ್ಟಿಫಿಕೇಟ್‌ ಯಾಕೆಂದು ವಿಪಕ್ಷಗಳ ವಾದ

Exit mobile version