ಲಖನೌ: ಉತ್ತರ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನದಂದು (Independence Day 2023) ಉಗ್ರರ ದಾಳಿಗೆ ಸಂಚು ರೂಪಿಸಿದ್ದನ್ನು (Terror Plot) ರಾಜ್ಯದ ಉಗ್ರ ನಿಗ್ರಹ ದಳ (ATS) ಅಧಿಕಾರಿಗಳು ಭೇದಿಸಿದ್ದು, ಹಿಜ್ಬುಲ್ ಮುಜಾಹಿದ್ದೀನ್ (Hizbul Mujahideen) ಉಗ್ರ ಸಂಘಟನೆಯ ಶಂಕಿತ ಉಗ್ರ ಅಹ್ಮದ್ ರಾಜಾ (Ahmed Raza) ಎಂಬಾತನನ್ನು ಬಂಧಿಸಿದ್ದಾರೆ.
ಮೊರಾದಾಬಾದ್‌ನ ಗುಲ್ಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಅಹ್ಮದ್ ರಾಜಾನನ್ನು ಎಟಿಎಸ್ ಅಧಿಕಾರಿಗಳು ಆಗಸ್ಟ್ 3ರಂದೇ ಬಂಧಿಸಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಸ್ವಾತಂತ್ರ್ಯ ದಿನದಂದು ರಾಜ್ಯದಲ್ಲಿ ಉಗ್ರ ದಾಳಿ ನಡೆಸಲು ಸಂಚು ರೂಪಿಸಿದ ಈತನು ಅಮೆರಿಕದಲ್ಲಿ ತಯಾರಿಸಲಾದ ಪಿಸ್ತೂಲ್ ಒಂದನ್ನು ಖರೀದಿಸಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
“ಬಂಧಿತ ಉಗ್ರನು ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ವಾಲೀದ್ ಜತೆ ನಂಟು ಹೊಂದಿದ್ದ. ಆತನ ಜತೆ ನಿರಂತರವಾಗಿ ಸಂಪರ್ಕ ಹೊಂದಿದ್ದಾನೆ. ಉಗ್ರರ ಜತೆ ನಂಟು ಹೊಂದಿರುವ ಕುರಿತು ಇವನ ಮೊಬೈಲ್‌ನಿಂದ ಹಲವು ಫೋಟೊಗಳು ಹಾಗೂ ವಿಡಿಯೊಗಳು ಲಭ್ಯವಾಗಿವೆ. ತಾಲಿಬಾನ್ ಸೇನೆಯನ್ನು ಸೇರುವುದು ಈತನ ಗುರಿಯಾಗಿತ್ತು” ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದರು.
ದಾಳಿಗಾಗಿ ಪಿಸ್ತೂಲ್ ಖರೀದಿಸಿ ಗ್ರಾಮದ ಬಳಿ ಬಚ್ಚಿಟ್ಟಿದ್ದಾನೆ. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಗ್ರಾಮದ ಬಳಿ ಒಂದು ಪಿಸ್ತೂಲ್, 32-ಬೋರ್ ಮ್ಯಾಗಜಿನ್ ಹಾಗೂ 6 ಜೀವಂತ ಕ್ಯಾಟ್ರಿಜ್‌ಗಳು ಸಿಕ್ಕಿವೆ. ಈತನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಜತೆಗೆ ಪಾಕಿಸ್ತಾನದ ಹಲವು ಉಗ್ರರ ಜತೆ ನಂಟು ಹೊಂದಿದ್ದ ಎಂದು ತನಿಖೆಯಿಂದ ಬಹಿರಂಗವಾಗಿದೆ.
ಇದನ್ನೂ ಓದಿ: Independence Day 2023: ತಿರಂಗಾವನ್ನು ಜಾಲತಾಣಗಳ ಡಿಪಿ ಇಟ್ಟು ದೇಶಪ್ರೇಮ ಮೆರೆಯಲು ಮೋದಿ ಕರೆ
ಬುರ್ಹಾನ್ ವಾನಿ ಫಾಲೋವರ್
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಬುರ್ಹಾನ್ ವಾನಿ ಹಾಗೂ ಜಾಕೀರ್ ಮೂಸಾ ಅವರಿಂದ ಪ್ರೇರೇಪಣೆಗೊಂಡು ಅಹ್ಮದ್ ರಾಜಾ ಉಗ್ರ ಸಂಘಟನೆಗೆ ಬೆಂಬಲ ಸೂಚಿಸಿ, ದಾಳಿಗೆ ಸಂಚು ರೂಪಿಸಿದ್ದ. ಈತನಿಗೆ ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ತರಬೇತಿ ನೀಡಲಾಗಿದೆ. ಅಹ್ಮದ್ ರಾಜಾನು ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್ ಚಾಟ್ ಪ್ರಕಾರ ಆತ ಪಾಕಿಸ್ತಾನ ಹಾಗೂ ಅಫಘಾನಿಸ್ತಾನ ಉಗ್ರರ ಜತೆಗೂ ನಂಟು ಹೊಂದಿದ್ದ ಎಂಬುದು ಬಯಲಾಗಿದೆ. ಉಗ್ರರಾದ ಜಾಕೀರ್ ಮೂಸಾ ಹಾಗೂ ಬುರ್ಹಾನ್ ವಾನಿಯನ್ನು ಯೋಧರು ಹೊಡೆದುರುಳಿಸಿದ್ದಾರೆ.