Site icon Vistara News

Veer Savarkar Row: ಕರ್ನಾಟಕ ಪಠ್ಯದಿಂದ ಕೈಬಿಟ್ಟ ವೀರ ಸಾವರ್ಕರ್‌ ಉ.ಪ್ರ ಪಠ್ಯದಲ್ಲಿ!

Veer Savarkar Chapter In Uttar Pradesh Textbooks

Uttar Pradesh Board Revamps Classes 9-12 Syllabus; Adds Veer Savarkar, Shivaji

ಲಖನೌ: ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವು ಪಠ್ಯಪುಸ್ತಕಗಳಿಂದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ (Veer Savarkar Row) ಅವರ ಅಧ್ಯಾಯವನ್ನು ಕೈಬಿಟ್ಟ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ವೀರ ಸಾವರ್ಕರ್‌ ಕುರಿತ ಅಧ್ಯಾಯವನ್ನು ಸೇರಿಸಲಾಗಿದೆ. ಆ ಮೂಲಕ ಕಾಂಗ್ರೆಸ್‌ಗೆ ಉತ್ತರ ಪ್ರದೇಶ ಬಿಜೆಪಿಯು ತಿರುಗೇಟು ನೀಡಿದೆ.

ಹೌದು, ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷತ್‌ (UPMSP) ಪಠ್ಯದಲ್ಲಿ ಹಲವು ಬದಲಾವಣೆ ಮಾಡಿದೆ. ಉತ್ತರ ಪ್ರದೇಶದ 9ರಿಂದ 12ನೇ ತರಗತಿ ಪಠ್ಯಪುಸ್ತಕಗಳಲ್ಲಿ ವೀರ ಸಾವರ್ಕರ್‌, ಛತ್ರಪತಿ ಶಿವಾಜಿ, ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು, ಸ್ವಾಮಿ ವಿವೇಕಾನಂದ ಸೇರಿ ಹಲವು ಮಹನೀಯರ ಕುರಿತ ಅಧ್ಯಾಯಗಳನ್ನು ಸೇರ್ಪಡೆ ಮಾಡಿದೆ.

“ವಿದ್ಯಾರ್ಥಿಗಳ ಸರ್ವತೋಮುಖ ಜ್ಞಾನಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ದೇಶದ ಸ್ವಾತಂತ್ರ್ಯ ಹೋರಾಟಗಾರರು, ಆಡಳಿತಗಾರರು ಹಾಗೂ ನಾಯಕರ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. 2023-24ರ ಶೈಕ್ಷಣಿಕ ಸಾಲಿನಿಂದಲೇ ನೂತನ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಲಿವೆ. ರಾಜ್ಯದಲ್ಲಿರುವ 27 ಶಾಲೆಗಳಲ್ಲಿ ಒಂದು ಕೋಟಿಗೂ ಅಧಿಕ ವಿದ್ಯಾರ್ಥಿಗಳು 9ರಿಂದ 12ನೇ ತರಗತಿ ಅಧ್ಯಯನ ಮಾಡುತ್ತಿದ್ದಾರೆ. ಇವರಲ್ಲರಿಗೂ ನೂತನ ಪಠ್ಯಪುಸ್ತಕಗಳು ಸಿಗಲಿವೆ” ಎಂದು ಯುಪಿಎಂಎಸ್‌ಪಿ ಕಾರ್ಯದರ್ಶಿ ದಿವ್ಯಕಾಂತ್‌ ಶುಕ್ಲಾ ತಿಳಿಸಿದ್ದಾರೆ.

ತಂತ್ರಜ್ಞಾನ ಅಧ್ಯಯನಕ್ಕೂ ಆದ್ಯತೆ

ಉತ್ತರ ಪ್ರದೇಶ ಪಠ್ಯಪುಸ್ತಕಗಳಲ್ಲಿ ಸಾವರ್ಕರ್‌, ಶಿವಾಜಿ ಅವರಂತಹ ಮಹಾನ್‌ ನಾಯಕರ ಅಧ್ಯಾಯ ಸೇರ್ಪಡೆ ಮಾಡುವ ಜತೆಗೆ ತಂತ್ರಜ್ಞಾನದ ಅಧ್ಯಯನಕ್ಕೂ ಆದ್ಯತೆ ನೀಡಲಾಗಿದೆ. ಕೃತಕ ಬುದ್ಧಿಮತ್ತೆ (rtificial Intelligence), ಬ್ಲಾಕ್‌ಚೈನ್‌ ತಂತ್ರಜ್ಞಾನ, ಇಂಟರ್‌ನೆಟ್‌, 3ಡಿ ಪ್ರಿಂಟಿಂಗ್‌, ಕ್ಲೌಡ್‌ ಕಂಪ್ಯೂಟಿಂಗ್‌, ಅಡ್ವಾನ್ಸ್ಡ್‌ ಜಾವಾ, ಡ್ರೋನ್‌, ರೋಬೊಟಿಕ್ಸ್‌, ಕ್ರಿಪ್ಟೋಕರೆನ್ಸಿ ಸೇರಿ ಹಲವು ವಿಷಯಗಳನ್ನು ಕೂಡ ಸೇರಿಸಲಾಗಿದೆ.

ಇದನ್ನೂ ಓದಿ: Veer Savarkar Row: ಪಠ್ಯಪುಸ್ತಕ ಪರಿಷ್ಕರಣೆ; ನ್ಯೂಟನ್‌ ಹೇಳಿಕೆ ಉಲ್ಲೇಖಿಸಿ ಸಿದ್ದು ಸರ್ಕಾರಕ್ಕೆ ಸಾವರ್ಕರ್‌ ಮೊಮ್ಮಗ ಟಾಂಗ್

ಕರ್ನಾಟಕದಲ್ಲಿ ವಿವಾದ

ವೀರ ಸಾವರ್ಕರ್‌ ಕುರಿತ ಅಧ್ಯಾಯವನ್ನು ಬಿಜೆಪಿ ಸರ್ಕಾರವು ಸೇರಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ವೀರ ಸಾವರ್ಕರ್‌ ಅವರ ಕುರಿತ ಅಧ್ಯಾಯವನ್ನು ಪಠ್ಯದಿಂದ ಕೈಬಿಡಲು ಸೂಚಿಸಿದೆ. ಈಗಾಗಲೇ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡೆ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀರ ಸಾವರ್ಕರ್‌ ಅವರ ಮೊಮ್ಮಗ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.

Exit mobile version