ವಾರಾಣಸಿ: ದೇಶದ ಬೃಹತ್ ಧಾರ್ಮಿಕ ಸ್ಮಶಾನ ಎಂದೇ ಖ್ಯಾತಿಯಾದ, ಮೋಕ್ಷದಾಯಿನಿ ಸ್ಮಶಾನ ಎಂತಲೂ ಕರೆಯುವ ವಾರಾಣಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಉತ್ತರ ಪ್ರದೇಶ ಸರ್ಕಾರವು ‘ಅಸ್ಥಿ ಬ್ಯಾಂಕ್’ (Asthi Bank) ಸ್ಥಾಪಿಸಲು ತೀರ್ಮಾನಿಸಿದೆ. ಇದರಿಂದ ಜನರು ತಮ್ಮ ಸಂಬಂಧಿಕರ ಅಸ್ಥಿಯನ್ನು ಪಡೆಯಲು ಸಾಧ್ಯವಾಗಲಿದೆ.
“ಅಸ್ಥಿ ಬ್ಯಾಂಕ್ ಸ್ಥಾಪನೆಯ ಅವಶ್ಯಕತೆಯನ್ನು ಮನಗಂಡು ರಾಜ್ಯ ಸರ್ಕಾರವು ಮಣಿಕರ್ಣಿಕಾ ಘಾಟ್‌ನಲ್ಲಿ ಅಸ್ಥಿ ಬ್ಯಾಂಕ್ ಸ್ಥಾಪಿಸಲು ತೀರ್ಮಾನಿಸಿದೆ. ಇದರಿಂದ ಜನರು ತಮ್ಮ ಸಂಬಂಧಿಕರು, ಪ್ರೀತಿಪಾತ್ರರ ಅಸ್ಥಿಯನ್ನು ಸಂಗ್ರಹಿಸಿಡಲು ಸಾಧ್ಯವಾಗುವುದಲ್ಲದೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಬ್ಯಾಂಕ್ ಸೌಲಭ್ಯ ಕಲ್ಪಿಸಲಿದೆ” ಎಂದು ನಗರ ನಿಗಮ ವಾರಾಣಸಿ ನಗರ ಸ್ವಸ್ಥ ಅಧಿಕಾರಿ ಎಂ.ಪಿ.ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: PM Narendra Modi | ಜಗತ್ತಿನ ಅತಿ ಉದ್ದದ ರಿವರ್ ಕ್ರೂಸ್ ಎಂವಿ ಗಂಗಾ ವಿಲಾಸ್‌ಗೆ ವಾರಾಣಸಿಯಲ್ಲಿ ಪ್ರಧಾನಿ ಚಾಲನೆ
“ಅಸ್ಥಿ ಬ್ಯಾಂಕ್ ಸ್ಥಾಪನೆಯ ಯೋಜನೆಯ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ಹಣಕಾಸು ವರ್ಷದಿಂದ ಇದು ಕಾರ್ಯಾರಂಭ ಮಾಡಲಿದೆ” ಎಂದು ತಿಳಿಸಿದರು. ಮಣಿಕರ್ಣಿಕಾ ಘಾಟ್‌ನಲ್ಲಿ ನಿತ್ಯ ಸರಾಸರಿ 90-120 ಶವಗಳ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಬೇರೆ ಜಿಲ್ಲೆಗಳಿಂದ ಬಂದವರು ಸರತಿಯಲ್ಲಿ ಕಾಯಬೇಕಾಗುತ್ತದೆ. ಬಹುತೇಕ ಸಮಯದಲ್ಲಿ ಮೃತರ ಸಂಬಂಧಿಕರು ಅಸ್ಥಿಯನ್ನೂ ಪಡೆಯದೆ ತೆರಳುತ್ತಾರೆ. ಅಂತಹವರಿಗೆ ಅನುಕೂಲವಾಗಲಿ ಎಂದು ಅಸ್ಥಿ ಬ್ಯಾಂಕ್ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬ್ಯಾಂಕ್ ಸ್ಥಾಪನೆಯಾದ ಬಳಿಕ ಮೃತರ ಅಸ್ಥಿಯನ್ನು ಸಂಗ್ರಹಿಸಿ, ಬಳಿಕ ಅವರ ಸಂಬಂಧಿಕರಿಗೆ ನೀಡುವುದು ಪ್ರಮುಖ ಉದ್ದೇಶವಾಗಿದೆ.