ವರ ಮದುವೆಗೆ ತಡವಾಗಿ ಬಂದ, ವರ ಮದುವೆ ದಿನವೇ ಕುಡಿದು ಮಲಗಿದ, ವರನ ಕಡೆಯವರು ನೀಡಿದ ಉಡುಪು ಕಡಿಮೆ ಬೆಲೆಯದ್ದು ಎಂಬಿತ್ಯಾದಿ ಕಾರಣವೊಡ್ಡಿ ಯುವತಿಯರು ಮದುವೆ ದಿನವೇ ಆ ಮದುವೆ ಮುರಿದುಕೊಂಡ ಸುದ್ದಿಯನ್ನು ನಾವು ಈಗಾಗಲೇ ಕೇಳಿದ್ದೇವೆ. ಈಗ ಅಂಥದ್ದೇ ಒಂದು ವಿಚಿತ್ರ ಕಾರಣಕ್ಕೆ ವಿವಾಹವೊಂದು ಮುರಿದುಬಿದ್ದಿದೆ. ಆದರ ಈ ಸಲ ಮದುವೆ ಬೇಡವೆಂದಿದ್ದು ವಧುವಲ್ಲ, ವರ. ತಾನು ಮದುವೆಯಾಗಲಿರುವ ಹುಡುಗಿ 12ನೇ ತರಗತಿಯಲ್ಲಿ ಅತ್ಯಂತ ಕಡಿಮೆ ಅಂಕ ಪಡೆದಿದ್ದಾಳೆ ಎಂಬ ಕಾರಣವೊಡ್ಡಿ ವರ ಮದುವೆ ಮುರಿದುಕೊಂಡಿದ್ದಾನೆ. ಇದೊಂದು ವಿಲಕ್ಷಣ, ವಿಚಿತ್ರ ಕೇಸ್ ಆಗಿದೆ.
ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ತಿರ್ವಾ ಕೋತ್ವಾಲಿ ಎಂಬ ಏರಿಯಾದಲ್ಲಿ. ಇದೀಗ ವಧುವಿನ ಕುಟುಂಬದವರು ವರ ಮತ್ತು ಆತನ ಕುಟುಂಬದ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ವರನ ಕಡೆಯವರು ವರದಕ್ಷಿಣೆ ನೀಡುವಂತೆ ಕೇಳಿದ್ದರು. ಆದರೆ ನಾವದನ್ನು ಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕ್ಷುಲ್ಲಕ ಕಾರಣವೊಡ್ಡಿ ಮದುವೆ ಮುರಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ‘ಈ ಮದುವೆ 2022ರಲ್ಲೇ ಫಿಕ್ಸ್ ಆಗಿತ್ತು. 2022ರ ಡಿಸೆಂಬರ್ 14ರಂದು ಗೋಧ್ ಬಾರೈ (ವರನ ಕುಟುಂಬದ ಮಹಿಳೆಯರು, ವಧುವನ್ನು ತಮ್ಮನೆ ಸೊಸೆ ಎಂದು ಸ್ವೀಕಾರ ಮಾಡುವ ಕಾರ್ಯಕ್ರಮ) ಕೂಡ ನಡೆದು ಹೋಗಿದೆ. ಆದರೆ ಈಗ ಮದುವೆ ಮುರಿದುಕೊಳ್ಳುತ್ತಿದ್ದಾರೆ ಎಂದವರು ಹೇಳಿದ್ದಾರೆ.
ಇದನ್ನೂ ಓದಿ: Viral post: ಜಿಲೇಬಿ ಮಸಾಲಾ! ಹೀಗೊಂದು ವಿಚಿತ್ರವಾದ ಬೀದಿಬದಿಯ ಚಾಟ್
‘ವರನ ಕಡೆಯವರು ಗೋಧ್ ಬಾರೈ ಸಮಾರಂಭ ಮುಗಿಯುತ್ತಿದ್ದಂತೆ ವರದಕ್ಷಿಣೆಗೆ ಆಗ್ರಹಿಸಿದರು. ನಾನು ಗೋಧ್ ಬಾರೈಗಾಗಿ 60 ಸಾವಿರ ರೂಪಾಯಿ ಖರ್ಚು ಮಾಡಿದೆ. ವರನಿಗೆ 15 ಸಾವಿರ ರೂ.ಮೌಲ್ಯದ ಉಂಗುರವೊಂದನ್ನು ಕೊಟ್ಟೆ. ಅಷ್ಟಾದರೂ ಸಮಾಧಾನವಿಲ್ಲ. ಮತ್ತೆ ಮತ್ತೆ ಹಣ ಕೇಳಲು ತೊಡಗಿದರು. ಯಾವಾಗ ನನಗೆ ಸಾಧ್ಯವಿಲ್ಲ ಎಂದು ಹೇಳಿದನೋ, ಆಗ ನನ್ನ ಮಗಳ 12ನೇ ತರಗತಿ ಅಂಕದ ವಿಷಯ ತೆಗೆದು, ಮದುವೆ ಮುರಿದುಕೊಂಡರು ಎಂದು ಆಕೆಯ ತಂದೆ ಹೇಳಿದ್ದಾರೆ. ಸದ್ಯ ಪೊಲೀಸರು ಎರಡೂ ಕುಟುಂಬದವನ್ನು ಭೇಟಿಯಾಗಿದ್ದಾರೆ. ಕೇಸ್ ಬಗೆಹರಿಸುವ ಪ್ರಯತ್ನದಲ್ಲಿದ್ದಾರೆ.