ಲಖನೌ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ 77 ವರ್ಷದ ವ್ಯಕ್ತಿಯೊಬ್ಬರು ಬಿಲಿಸಿನಿಂದ ಪಾರಾಗಲು ಅದ್ಭುತ ಐಡಿಯಾ ಕಂಡುಕೊಂಡಿದ್ದಾರೆ. ಅವರೀಗ ಇಂಟರ್ನೆಟ್ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಮತ್ತೇನಲ್ಲ, ಈ ವ್ಯಕ್ತಿ ತಮ್ಮ ಹೆಲ್ಮೆಟ್ಗೆ ಸೋಲಾರ್ ಚಾಲಿತ ಫ್ಯಾನ್ ಅಳವಡಿಸಿಕೊಂಡಿದ್ದಾರೆ. ಹಳದಿ ಹೆಲ್ಮೆಟ್ ಮುಂಭಾಗದಲ್ಲಿ ಪುಟ್ಟ ಫ್ಯಾನ್ ಇಟ್ಟುಕೊಂಡಿದ್ದರೆ, ಹೆಲ್ಮೆಟ್ ಮೇಲೆ ಚಿಕ್ಕದಾದ ಸೋಲಾರ್ ಫಲಕ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಅವರು ಎಷ್ಟೇ ಬಿಸಿಲಿನ, ಉಷ್ಣತೆಯುಳ್ಳ ಪ್ರದೇಶಕ್ಕೆ ಹೋದರೂ ಆ ಫ್ಯಾನ್ ತಿರುಗಿ, ಅವರಿಗೆ ಸೆಖೆಯಾಗುವುದನ್ನು ತಡೆಯುತ್ತದೆ. ಹೀಗೆ ಹೆಲ್ಮೆಟ್ಗೆ ಸೋಲಾರ್ ಪ್ಯಾನೆಲ್ ಮತ್ತು ಫ್ಯಾನ್ ಅಳವಡಿಸಿಕೊಂಡು ಓಡಾಡುವ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇವರ ಕ್ರಿಯೆಟೇಟಿವಿಟಿಗೆ ಜನ ಹುಬ್ಬೇರಿಸಿದ್ದಾರೆ.
ಈ ವ್ಯಕ್ತಿಯ ಹೆಸರು ಲಲ್ಲುರಾಮ್. ಮನೆಮನೆಗೆ ಹೋಗಿ ಹೂವು ಮಾರುವ ಕೆಲಸ ಮಾಡುತ್ತಾರೆ. ಆದರೆ ಅತಿಯಾದ ಉಷ್ಣತೆ, ಬಿಸಿಲಿನಿಂದಾಗಿ ಅವರಿಗೆ ಇತ್ತೀಚೆಗೆ ಆಗಾಗ ಆರೋಗ್ಯ ಹಾಳಾಗುತ್ತಿತ್ತು. ಹೂವು ಮಾರಲು ಹೋಗಲು ಆಗುತ್ತಿರಲಿಲ್ಲ. ಆದರೆ ಕೆಲಸ ಮಾಡದೆ ಸುಮ್ಮನೆ ಕುಳಿತುಕೊಳ್ಳಲೂ ಸಾಧ್ಯವಿಲ್ಲ. ಬದುಕು ನಡೆಯಬೇಕು, ಮನೆಯ ಖರ್ಚು ನಿಭಾಯಿಸಬೇಕು ಎಂದರೆ ಇವರೇ ದುಡಿಯಬೇಕು. ಹೀಗಾಗಿ ಲಲ್ಲುರಾಮ್ ಈ ಉಪಾಯ ಕಂಡುಕೊಂಡಿದ್ದಾರೆ.
ತನ್ನೊಂದಿಗೆ ಒಂದು ಪುಟ್ಟ ಫ್ಯಾನ್ (ಒಂದು ಕಡೆಯಿಂದ ಮತ್ತೊಂದು ಕಡೆ ಒಯ್ಯಲು ಸಾಧ್ಯವಾಗುವ) ಇಟ್ಟುಕೊಳ್ಳುವುದು ಉತ್ತಮ ಎಂಬ ವಿಚಾರ ಲಲ್ಲುರಾಮ್ ತಲೆಗೆ ಬಂತು. ಆದರೆ ಅದನ್ನೆಲ್ಲಿ ಇಟ್ಟುಕೊಳ್ಳುವುದು, ಕೈಯಲ್ಲಿ ಹೂವಿನ ಬುಟ್ಟಿ ಇರುವಾಗ ತೆಗೆದುಕೊಂಡು ಹೋಗುವುದಾದರೂ ಹೇಗೆ? ಆಗ ಹೊಳೆದಿದ್ದೇ ಹೆಲ್ಮೆಟ್ ಐಡಿಯಾ !-‘ಬಿಸಿಲು ಹೆಚ್ಚುತ್ತಿದ್ದಂತೆ ಹೆಲ್ಮೆಟ್ ಮೇಲಿನ ಸೋಲಾರ್ ಪ್ಯಾನೆಲ್ ಹೀಟ್ ಆಗಿ, ಅದರಿಂದ ಫ್ಯಾನ್ ಕೂಡ ತಿರುಗಲು ಶುರುವಾಗುತ್ತದೆ. ಇದು ನನಗೆ ತುಂಬ ಆರಾಮ ಕೊಡುತ್ತಿದೆ’ ಎನ್ನುತ್ತಿದ್ದಾರೆ ಲಲ್ಲುರಾಮ್.
ಹೀಗೆ ಹೆಲ್ಮೆಟ್ಗೆ ಫ್ಯಾನ್ ಅಳವಡಿಸಲು ನಾನು ಏನನ್ನೂ ಖರೀದಿಸಿಲ್ಲ. ಇದಕ್ಕೆ ಅಗತ್ಯ ಇರುವ ವಸ್ತುಗಳನ್ನು ನಾನು ಹಲವರಿಂದ ಎರವಲು ಪಡೆದಿದ್ದೇನೆ. ಯಾಕೆಂದರೆ ನನಗೆ ಉಷ್ಣತೆಯಿಂದಲೇ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಹಣ ಉಳಿಸಲೂ ಸಾಧ್ಯವಾಗಿರಲಿಲ್ಲ. ತುಂಬ ಯೋಚನೆ ಮಾಡಿ ಇದನ್ನು ತಯಾರಿಸಿಕೊಂಡಿದ್ದೇನೆ ಎಂದೂ ಹೂವಿನ ವ್ಯಾಪಾರಿ ಹೇಳಿದ್ದಾರೆ.
ಇದನ್ನೂ ಓದಿ: Viral Video | ಚುಡಾಯಿಸಿದವನಿಗೆ ಹುಡುಗಿಯ ಚಪ್ಪಲಿ ಏಟು; 20 ಸೆಕೆಂಡ್ಗಳಲ್ಲಿ 40 ಬಾರಿ ಥಳಿತ !