ಲಖನೌ: ಮುಸ್ಲಿಂ ಹೆಣ್ಣುಮಕ್ಕಳ ಜೀವನಕ್ಕೇ ಕುತ್ತು ತರುತ್ತಿದ್ದ ‘ತ್ರಿವಳಿ ತಲಾಕ್’ (Triple Talaq) ಎಂಬ ಅನಿಷ್ಟ ಪೀಡೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆದರೂ, ಕೆಲವು ದುರ್ಬುದ್ಧಿಯ ಪುರುಷರು ಪತ್ನಿಗೆ ತ್ರಿವಳಿ ತಲಾಕ್ ನೀಡುವ ಮೂಲಕ ಕಂಬಿ ಎಣಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ ವರದಕ್ಷಿಣೆಯ ಆಸೆಗಾಗಿ ಮದುವೆಯಾದ ಎರಡು ಗಂಟೆಯಲ್ಲಿಯೇ ಪತ್ನಿಗೆ ತ್ರಿವಳಿ ತಲಾಕ್ ನೀಡಿದ್ದಾನೆ. ಈತನ ವಿರುದ್ಧ ವಧುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆಗ್ರಾದಲ್ಲಿರುವ ಪ್ರಿಯಾಂಶು ಗಾರ್ಡನ್‌ನಲ್ಲಿ ಗುರುವಾರ ರಾತ್ರಿ (ಜುಲೈ 13) ಆಸಿಫ್ ಎಂಬಾತನು ಡಾಲಿ ಎಂಬ ಯುವತಿಯನ್ನು ಮದುವೆಯಾಗಿದ್ದಾನೆ. ಎಲ್ಲರೂ ಮದುವೆಯಾದ ಸಂಭ್ರಮದಲ್ಲಿದ್ದಾಗಲೇ ವರನು ತನಗೆ ಹೆಚ್ಚಿನ ವರದಕ್ಷಿಣೆ ಬೇಕು ಎಂದು ವರಾತ ತೆಗೆದಿದ್ದಾನೆ. ನನಗೆ ಐಷಾರಾಮಿ ಕಾರು ಬೇಕು, ಇನ್ನೂ ಹೆಚ್ಚಿನ ಚಿನ್ನಾಭರಣ ಬೇಕು ಎಂದು ಪಟ್ಟು ಹಿಡಿದಿದ್ದಾನೆ. ಮದುವೆಯಾದ ಎರಡು ಗಂಟೆಯಲ್ಲೇ ಹೆಚ್ಚಿನ ವರದಕ್ಷಿಣೆ ಬೇಕು ಎಂದಾಗ ವಧುವಿನ ಕಡೆಯವರು ದಂಗಾಗಿದ್ದಾರೆ.
ಮದುವೆಯಾದ ಕೆಲವೇ ಕ್ಷಣಗಳಲ್ಲಿ ವರನು ಹೆಚ್ಚಿನ ವರದಕ್ಷಿಣೆ ಕೇಳುತ್ತಲೇ ಆತನ ಕುಟುಂಬಸ್ಥರು ಕೂಡ ಇದೇ ಮಾತು ಆಡಿದ್ದಾರೆ. ಈಗ ಏಕಾಏಕಿ ಕೇಳಿದರೆ ಹೇಗೆ ಎಂದು ವಧುವಿನ ಕಡೆಯವರು ಕೇಳಿದ್ದಕ್ಕೆ ವರನು ಇನ್ನಷ್ಟು ಕುಪಿತಗೊಂಡಿದ್ದಾನೆ. ಆಗ ವಧು ಹಾಗೂ ವರನ ಕುಟುಂಬಸ್ಥರ ಮಧ್ಯೆ ವಾಗ್ವಾದ ನಡೆದಿದೆ. ಇದೇ ವೇಳೆ, ವಧುವಿನ ಎದುರು ನಿಂತ ವರನು ಮೂರು ಬಾರಿ ತ್ರಿವಳಿ ತಲಾಕ್ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಮೊದಲ ತ್ರಿವಳಿ ತಲಾಕ್ ಪ್ರಕರಣ ದಾಖಲು; ಪತಿಯಿಂದ ಜೀವ ಬೆದರಿಕೆ
ತ್ರಿವಳಿ ತಲಾಕ್ ನೀಡಿ ವರನು ಎದ್ದು ಹೋದ ಬಳಿಕ ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ವಧುವಿನ ಕಡೆಯವರು ದೂರು ನೀಡಿದ್ದಾರೆ. ವಧು, ಆತನ ತಂದೆ ಸೇರಿ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೇಶದಲ್ಲಿ ತ್ರಿವಳಿ ತಲಾಕ್ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ತಿಳಿದು ಕೂಡ ಕೆಲವರು ತ್ರಿವಳಿ ತಲಾಕ್ ನೀಡುತ್ತಿರುವ ಪ್ರಕರಣಗಳು ಸುದ್ದಿಯಾಗುತ್ತಿವೆ.