ಲಖನೌ: ಉತ್ತರ ಪ್ರದೇಶ ಜಲಶಕ್ತಿ ಇಲಾಖೆ ರಾಜ್ಯ ಸಚಿವ ದಿನೇಶ್ ಖಾಟಿಕ್ ಅವರಿಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಸ್ತಿನಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅವರು ತಮ್ಮ ರಾಜೀನಾಮೆ ಪತ್ರವನ್ನು ನೇರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಕಳಿಸಿದ್ದಾರೆ. ಹಾಗೇ, ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜಭವನಕ್ಕೆ ಕೂಡ ಕಳಿಸಿದ್ದಾರೆ. ʼಜಲಶಕ್ತಿ ಇಲಾಖೆಯಲ್ಲಿ ಭ್ರಷ್ಟಾಚಾರವೇ ತುಂಬಿ ಹೋಗಿದೆ. ನನ್ನ ಮಾತನ್ನು ಯಾರೂ ಕೇಳುತ್ತಿಲ್ಲʼ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉತ್ತರ ಪ್ರದೇಶದ ಜಲಶಕ್ತಿ ಸಚಿವಾಲಯದ ಮುಖ್ಯ ಸಚಿವ ಸ್ವತಂತ್ರ ದೇವ್ ಸಿಂಗ್. ಇವರು ಸಹಾಯಕ ಸಚಿವರಾಗಿದ್ದರು. ಈಗ ಇಲ್ಲೇ ಭಿನ್ನಾಭಿಪ್ರಾಯ ಎದ್ದಿದೆ. ʼಇಲಾಖೆಯಲ್ಲಿ ನಾನು ಸಹಾಯಕ ಸಚಿವನಾದರೂ ನನಗೆ ಬೆಲೆ ಸಿಗುತ್ತಿಲ್ಲ. ನಾನೊಬ್ಬ ದಲಿತ ಎಂಬ ಕಾರಣಕ್ಕೆ ನನ್ನನ್ನು ದೂರವೇ ಇಡಲಾಗುತ್ತಿದೆ. ಅಧಿಕಾರಿಗಳೂ ನನಗೆ ಬೆಲೆ ಕೊಡುತ್ತಿಲ್ಲ. ಸಚಿವಾಲಯಕ್ಕೆ ಸಂಬಂಧಪಟ್ಟ ಮುಖ್ಯ ವಿಚಾರಗಳನ್ನು ನನಗೆ ಹೇಳುತ್ತಿಲ್ಲ. ಒಂದೇ ಒಂದು ಸಭೆಗೂ ಕರೆಯುತ್ತಿಲ್ಲ. ಸಚಿವರಿಗೆ ಕೊಡುವ ಕಾರನ್ನು ಕೊಟ್ಟಿದ್ದಾರೆ ಎನ್ನುವುದನ್ನು ಬಿಟ್ಟರೆ, ಇನ್ಯಾವುದೇ ಗೌರವವೂ ಲಭಿಸುತ್ತಿಲ್ಲ. ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ಬಾರಿ ಎರಡನೇ ಅವಧಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗೆ ಸರ್ಕಾರ ರಚನೆಯಾ ನಂತರ ಯೋಗಿ ಸಂಪುಟದಿಂದ ಹೊರಬಿದ್ದ ಮೊದಲ ಸಚಿವ ದಿನೇಶ್ ಖಾಟಿಕ್. ಈಗ ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್‌ಗೆ ಕಳಿಸಿದ ಪತ್ರದಲ್ಲಿ, ʼನಮ್ಮ ಜಲಶಕ್ತಿ ಇಲಾಖೆಯಲ್ಲಿ ಇತ್ತೀಚೆಗೆ ಅಧಿಕಾರಿಗಳ ವರ್ಗಾವಣೆಯಾಯಿತು. ಹಣ ಪಡೆದು ಬೇಕಾದಲ್ಲಿಗೆ ವರ್ಗ ಮಾಡಿಸಿಕೊಡಲಾಯಿತು ಎಂದು ನಾನು ಕೇಳಲ್ಪಟ್ಟೆ. ಆ ಬಗ್ಗೆ ಖಚಿತವಾಗಿ ತಿಳಿದುಕೊಳ್ಳಲೆಂದು ನಾನು ಇಲ್ಲಿರುವ ಮುಖ್ಯ ಅಧಿಕಾರಿಗಳಿಗೆ ಕರೆ ಮಾಡಿದೆ. ಆದರೆ ನಾನು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಫೋನ್ ಅರ್ಧಕ್ಕೆ ಕಟ್ ಮಾಡುತ್ತಾರೆʼ ಎಂದು ಉಲ್ಲೇಖಿಸಿದ್ದಾರೆ. ಹಾಗೇ, ನಮಾಮಿ ಗಂಗಾ ಯೋಜನೆಯಲ್ಲೂ ಭಷ್ಟಾಚಾರ ನಡೆದಿದ್ದಾಗಿ ತಿಳಿಸಿದ್ದಾರೆ.
ದಿನೇಶ್ ಖಾಟಿಕ್ ಮಂಗಳವಾರ ನಡೆದ ಸಂಪುಟ ಸಭೆಗೆ ಹಾಜರಾಗಿರಲಿಲ್ಲ. ಅವರು ಸಚಿವ ಸ್ಥಾನ ತೊರೆಯುತ್ತಾರೆ ಎಂದೇ ಹೇಳಲಾಗಿತ್ತು. ಆದರೇ ಬಿಜೆಪಿ ನಾಯಕರು ಅದನ್ನು ಅಲ್ಲಗಳೆದಿದ್ದರು. ದಿನೇಶ್ ಖಾಟಿಕ್‌ಗೆ ಅಸಮಾಧಾನ ಇಲ್ಲ ಎಂದೇ ಹೇಳುತ್ತ ಬಂದಿದ್ದರು. ಆದರೆ ಅವರ ರಾಜೀನಾಮೆ ದೃಢಗೊಂಡಿದೆ. ಹಾಗೇ, ಪಿಡಬ್ಲ್ಯೂಡಿ ಇಲಾಖೆ ಸಚಿವ ಜಿತಿನ್ ಪ್ರಸಾದ್ ಕೂಡ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇವರೂ ಸಹ ತಮ್ಮ ಇಲಾಖೆಯಲ್ಲಿ ನಡೆದ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಅಸಮಾಧಾನಗೊಂಡಿದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ ಯೋಗಿ ಸರ್ಕಾರದ ಇಬ್ಬರು ಸಚಿವರ ಮುನಿಸು; ರಾಜೀನಾಮೆ ನೀಡುವ ಸಾಧ್ಯತೆ