Site icon Vistara News

Uttar Pradesh | ಹಿಂದೂ ಯುವಕನನ್ನು ವರಿಸಿದ ಮುಸ್ಲಿಂ ಯುವತಿ; ಇಲ್ಮಾ ಈಗ ಸೌಮ್ಯ ಶರ್ಮಾ

ಲಕ್ನೋ: ಮುಸ್ಲಿಂ ಯುವಕರನ್ನು ಹಿಂದೂ ಯುವತಿಯರು ಮದುವೆಯಾಗಿ, ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ನೋಡಿರುತ್ತೀರಿ. ಆದರೆ ಇದೀಗ ಉತ್ತರ ಪ್ರದೇಶದಲ್ಲಿ (Uttar Pradesh) ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ವರಿಸಿದ್ದು, ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ.

ಇದನ್ನೂ ಓದಿ: Pragya Singh Thakur | ಲವ್‌ ಜಿಹಾದ್‌ಗೆ ಹೆಣ್ಣು ಮಕ್ಕಳು ಬಲಿಯಾಗಬೇಡಿ, ಚಾಕುವನ್ನು ಹರಿತವಾಗಿಡಿ ಎಂದಿದ್ದ ಸಾಧ್ವಿ ವಿರುದ್ಧ ದೂರು

ಹೌದು. ಉತ್ತರ ಪ್ರದೇಶದ ಬದೌನ್‌ ಗ್ರಾಮದ ಯುವಕ ಸೋಮೇಶ್‌ ಶರ್ಮಾ ಹಲವು ವರ್ಷಗಳ ಹಿಂದೆ ಅದೇ ಊರಿನವಳಾದ ಇಲ್ಮಾಳನ್ನು ಭೇಟಿಯಾಗಿದ್ದ. ಅವರಿಬ್ಬರ ನಡುವೆ ಸ್ನೇಹವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಈ ನಡುವೆ ಸೋಮೇಶ್‌ಗೆ ದೆಹಲಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿದ್ದು, ಆತ ಅಲ್ಲಿಗೆ ಸ್ಥಳಾಂತರಗೊಂಡಿದ್ದಾನೆ. ಪ್ರೇಮಿಗಳಿಬ್ಬರು ದೂರದೂರಿನಲ್ಲಿ ಇದ್ದುಕೊಂಡೇ ಪ್ರೀತಿ ಮುಂದುವರಿಸಿದ್ದಾರೆ.‌

ಕೆಲ ವರ್ಷಗಳಿಂದ ಪ್ರೀತಿಯಲ್ಲಿರುವ ಈ ಜೋಡಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದೆ. ಆದರೆ ಧರ್ಮ ಬೇರೆ ಬೇರೆಯಾದ್ದರಿಂದ ಕುಟುಂಬಗಳು ಒಪ್ಪುವುದಿಲ್ಲವೆಂದು ಇಬ್ಬರೂ ಮನೆ ಬಿಟ್ಟು ಓಡಿ ಬಂದಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿರುವ ಅಗಸ್ತ್ಯ ಮುನಿ ಆಶ್ರಮದಲ್ಲಿ ವಿವಾಹವಾಗಿದ್ದಾರೆ. ಕೆ.ಕೆ.ಶಂಖಧರ್‌ ಹೆಸರಿನ ಪುರೋಹಿತರು ಈ ಜೋಡಿಗೆ ಹಿಂದೂ ಧರ್ಮದ ಪ್ರಕಾರ ವಿವಾಹವನ್ನು ಮಾಡಿಸಿದ್ದಾರೆ. ವಿವಾಹವಾದ ನಂತರ ಇಲ್ಮಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ತನ್ನ ಹೆಸರನ್ನು ಸೌಮ್ಯ ಶರ್ಮಾ ಎಂದು ಬದಲಿಸಿಕೊಂಡಿದ್ದಾಳೆ.

“ಸೋಮೇಶ್‌ ಮತ್ತು ಇಲ್ಮಾ ನನ್ನ ಬಳಿ ಬಂದು ಮದುವೆ ಮಾಡಿಸಿಕೊಡಿ ಎಂದು ಕೇಳಿಕೊಂಡರು. ಧರ್ಮ ಬೇರೆಯಾದ್ದರಿಂದ ಮನೆಯವರು ಯಾರೂ ಮದುವೆಯಲ್ಲಿ ಇರುವುದಿಲ್ಲ ಎಂದು ಹೇಳಿದರು. ನಾನು ಅವರ ದಾಖಲೆಗಳನ್ನು ಪರಿಶೀಲಿಸಿದ ನಂತರ ಒಪ್ಪಿ ಮದುವೆ ಮಾಡಿಸಿದ್ದೇನೆ” ಎಂದು ಹೇಳಿದ್ದಾರೆ ಪುರೋಹಿತರಾದ ಶಂಖಧರ್.‌

ಇದನ್ನೂ ಓದಿ: Pragya Singh Thakur | ಲವ್‌ ಜಿಹಾದ್‌ ವಿರುದ್ಧ ಹಿಂದು ಹೆಣ್ಣುಮಕ್ಕಳು ಆಟಂ ಬಾಂಬ್‌ಗಳಾಗಬೇಕು: ಪ್ರಜ್ಞಾ ಸಿಂಗ್ ಕರೆ

ಇತ್ತೀಚಿನ ದಿನಗಳಲ್ಲಿ ಹಿಂದೂ ಯುವತಿಯರು ಮುಸ್ಲಿಂ ಯುವಕನನ್ನು ವರಿಸಿ, ಅವರ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚಿವೆ. ಅದರಲ್ಲಿ ಹಲವು ಪ್ರಕರಣಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವತಿಯರು ಪ್ರಾಣ ಕಳೆದುಕೊಂಡಿದ್ದು, ಅದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿವೆ. ಲವ್‌ ಜಿಹಾದ್‌ನಿಂದ ಹಿಂದೂ ಯುವತಿಯರಿಗೆ ವಂಚಿಸಿ, ಪ್ರಾಣ ಕಳೆದುಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ಸಂಘಟನೆಗಳು ದೂರಲಾರಂಭಿಸಿವೆ. ಇದರ ವಿರುದ್ಧ ಸರ್ಕಾರಗಳೂ ಕ್ರಮಕ್ಕೆ ಮುಂದಾಗಿರುವುದನ್ನು ನಾವು ಕಾಣಬಹುದು.

Exit mobile version