Site icon Vistara News

Yogi Adityanath: ಯೋಗಿಗೆ ರಕ್ತದಲ್ಲಿ ಪತ್ರ ಬರೆದ ವಿದ್ಯಾರ್ಥಿನಿಯರು; ಪ್ರಿನ್ಸಿಪಾಲ್‌ ಅರೆಸ್ಟ್‌!

Letter In Blood To Yogi Adityanath

Uttar Pradesh school principal arrested after girls write letter in blood to Yogi Adityanath

ಲಖನೌ: ಉತ್ತರ ಪ್ರದೇಶದ ಘಾಜಿಯಾಬಾದ್‌ (Ghaziabad ) ಜಿಲ್ಲೆಯಲ್ಲಿರುವ ಶಾಲೆಯೊಂದರ ಪ್ರಾಂಶುಪಾಲನು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಶಾಲೆಯ ವಿದ್ಯಾರ್ಥಿನಿಯರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath:) ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಇನ್ನು ಪತ್ರ ಬರೆದಿರುವ ಪ್ರಕರಣ ಸುದ್ದಿಯಾಗುತ್ತಲೇ ಶಾಲೆಯ ಪ್ರಾಂಶುಪಾಲ ರಾಜೀವ್‌ ಪಾಂಡೆಯನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೂಚನೆ ಹಿನ್ನೆಲೆಯಲ್ಲಿ ಪ್ರಾಂಶುಪಾಲನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಘಾಜಿಯಾಬಾದ್‌ ಶಾಲೆಯ ವಿದ್ಯಾರ್ಥಿನಿಯರು ರಕ್ತದಲ್ಲಿ ಯೋಗಿ ಆದಿತ್ಯನಾಥ್‌ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ. “ಶಾಲೆಯ ಪ್ರಾಂಶುಪಾಲ ಡಾ. ರಾಜೀವ್‌ ಪಾಂಡೆಯು ವಿದ್ಯಾರ್ಥಿನಿಯರನ್ನು ತಮ್ಮ ಕಚೇರಿಗೆ ಕರೆದು, ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಪೋಷಕರಿಗೆ ಇವರು ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ, ನಾವು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಬೇಕು. ನಮಗೆ ನೀವು ನ್ಯಾಯ ಒದಗಿಸಬೇಕು” ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.‌

ಘಾಜಿಯಾಬಾದ್‌ ಶಾಲೆ ಪ್ರಾಂಶುಪಾಲ ರಾಜೀವ್‌ ಪಾಂಡೆ

ರಾಜೀವ್‌ ಪಾಂಡೆ ಆರೆಸ್ಸೆಸ್‌ ಸದಸ್ಯ

“ರಾಜೀವ್‌ ಪಾಂಡೆ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಮ್ಮ ಪೋಷಕರು ರಾಜೀವ್‌ ಪಾಂಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೂ, ಅವರು ನಮ್ಮ ಪೋಷಕರಿಗೇ ಬೆದರಿಕೆ ಹಾಕಿದ್ದಾರೆ. ರಾಜೀವ್‌ ಪಾಂಡೆಯು ಆರ್‌ಎಸ್‌ಎಸ್‌ ಸದಸ್ಯರೂ ಆಗಿರುವ ಕಾರಣ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ, ನೀವೇ ಮಧ್ಯಸ್ಥಿಕೆ ವಹಿಸಿ, ನಮಗೆ ನ್ಯಾಯ ಒದಗಿಸಬೇಕು” ಎಂದು ಮಕ್ಕಳು ಯೋಗಿ ಅವರನ್ನು ಒತ್ತಾಯಿಸಿದ್ದರು.

ಯೋಗಿ ಆದಿತ್ಯನಾಥ್‌ ಅವರಿಗೆ ಮಕ್ಕಳು ರಕ್ತದಲ್ಲಿ ಬರೆದ ಪತ್ರ

ಇದನ್ನೂ ಓದಿ: Jailer Movie: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರ ಕಾಲಿಗೆರಗಿದ ‘ಜೈಲರ್’ ರಜನಿಕಾಂತ್!

ಮಕ್ಕಳನ್ನು ಕಚೇರಿಗೆ ಕರೆದು, ಅವರನ್ನು ಅಸಭ್ಯವಾಗಿ ಮುಟ್ಟುತ್ತಿದ್ದ ಪ್ರಾಂಶುಪಾಲನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರ ಪೋಷಕರು ಇತ್ತೀಚೆಗೆ ಪಾಂಡೆ ಮೇಲೆ ಹಲ್ಲೆ ನಡೆಸಿದ್ದರು. ಪೋಷಕರು ಧರ್ಮದೇಟು ನೀಡಿದ ಬಳಿಕ ಗಾಯಗೊಂಡಿದ್ದ ರಾಜೀವ್‌ ಪಾಂಡೆ, ಪೋಷಕರ ವಿರುದ್ಧವೇ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾನೆ ಎಂದು ತಿಳಿದುಬಂದಿದೆ. ರಾಜೀವ್‌ ಪಾಂಡೆಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಘಾಜಿಯಾಬಾದ್‌ ಹಿರಿಯ ಪೊಲೀಸ್‌ ಅಧಿಕಾರಿ ಸಲೋನಿ ಅಗರ್ವಾಲ್‌ ತಿಳಿಸಿದ್ದಾರೆ.

Exit mobile version