Site icon Vistara News

Uttar Pradesh stampede: ಹತ್ರಾಸ್‌ ಕಾಲ್ತುಳಿತ ದುರ್ಘಟನೆ; ಸಾವಿನ ಸಂಖ್ಯೆ 60ಕ್ಕೆ ಏರಿಕೆ

Uttar Pradesh Stampede

ಲಖನೌ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಂಗಳವಾರ ‘ಸತ್ಸಂಗ’ ಧಾರ್ಮಿಕ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದ ದುರ್ಘಟನೆಯಲ್ಲಿ (Uttar Pradesh stampede) ಮೃತಪಟ್ಟವರ ಸಂಖ್ಯೆ 60 ಮೀರಿದೆ ಎಂದು ಹೇಳಲಾಗಿದೆ ಹತ್ರಾಸ್​​(Hatras) ಸಿಕಂದರಾ ರಾವ್ ಪಟ್ಟಣದಲ್ಲಿ ವಿಶೇಷವಾಗಿ ಹಾಕಲಾಗಿದ್ದ ಪೆಂಡಾಲ್​ನಲ್ಲಿ ಧಾರ್ಮಿಕ ಬೋಧಕರೊಬ್ಬರು ತಮ್ಮ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.‍

ಘಟನೆ ಸಂಬಂಧ ಹತ್ರಾಸ್‌ನ ಜಿಲ್ಲಾಧಿಕಾರಿ ಡಿಎಂ ಆಶೀಷ್‌ ಕುಮಾರ್ ಮಾತನಾಡಿದ್ದು, ಸಾವಿನ ಸಂಖ್ಯೆ 50-60ಕ್ಕೆ ಏರಿಕೆ ಆಗಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಹೊರಗೆ ತೆಗೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ಶಿವನ ಸತ್ಸಂಗದ ವೇಳೆ ಕಾಲ್ತುಳಿತ ಸಂಭವಿಸಿದೆ. ಸಮುದಾಯ ಆರೋಗ್ಯ ಕೇಂದ್ರಗಳಿಗೆ ಅವರೆಲ್ಲರನ್ನೂ ಕೊಂಡೊಯ್ಯಲಾಗಿದೆ. ಅದೇ ರೀತಿ ಹಲವಾರು ಮಂದಿ ಗಾಯಗೊಂಡಿದ್ದು ನಾನಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳೂ ಇದ್ದಾರೆ ಎನ್ನಲಾಗಿದೆ. ರತಿಭಾನ್​ಪುರದಲ್ಲಿ ಶಿವನ ಆರಾಧನೆಯ ಧಾರ್ಮಿಕ ಕಾರ್ಯಕ್ರಮ ನಡೆದಿದೆ.

ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ. ಒಟ್ಟು 15 ಮಹಿಳೆಯರು ಮತ್ತು ಮಕ್ಕಳನ್ನು ಇಟಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿನಾಥ, ತಕ್ಷಣವೇ ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಮುಖ್ಯಮಂತ್ರಿಗಳು, ಗಾಯಾಳುಗಳು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Narendra Modi: ದೇಶದ ಜನ ನಮ್ಮನ್ನು ಮೂರನೇ ಬಾರಿ ಗೆಲ್ಲಿಸಿದ್ದಾರೆ, ಕಾಂಗ್ರೆಸ್‌ಗೆ ನೂರು ಸ್ಥಾನ ಗೆಲ್ಲುವ ಯೋಗ್ಯತೆಯೂ ಇಲ್ಲ; ರಾಹುಲ್‌ಗೆ ಮೋದಿ ಗೇಲಿ

Exit mobile version