Site icon Vistara News

ಕೊನೆ ಹಂತದಲ್ಲಿ ಎದುರಾಯ್ತು ಮತ್ತೊಂದು ಅಡ್ಡಿ! ಕಾರ್ಮಿಕರ ರಕ್ಷಣೆಗೆ ತಾತ್ಕಾಲಿಕ ಆಸ್ಪತ್ರೆ ಸಿದ್ಧ

Uttarkashi Tunnel Collapse

How Trapped Workers Will Be Pulled Out On Stretchers From Tunnel?

ನವದೆಹಲಿ: ಉತ್ತರಕಾಶಿಯ ಸಿಲ್ಕ್ಯಾರ ಸುರಂಗ ಕುಸಿದ (Uttarakashi Tunnel Collapse) ಪರಿಣಾಮ ಮಧ್ಯದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆ ಕಾರ್ಯಾಚಣೆಯ (Rescue Operation) ಅಂತಿಮ ಹಂತಕ್ಕೆ ಬಂದಿದೆ. ಕಾರ್ಮಿಕರನ್ನು ತಲುಪಲು ಕಲ್ಲು ಮತ್ತು ಅವಶೇಷಗಳಿರುವ 12 ಮೀಟರ್ ಪ್ರದೇಶವನ್ನು ಕೊರೆಯಬೇಕಾಗಿದೆ. ಬುಧವಾರ ಮಧ್ಯ ರಾತ್ರಿ ಹೊತ್ತಿಗೆ ಕಾರ್ಯಾಚರಣೆಯ ಯಶಸ್ವಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಡ್ರಿಲ್ಲಿಂಗ್ ಯಂತ್ರಕ್ಕೆ (Drilling Machine) ಮತ್ತೊಂದು ಅಡ್ಡಿ ಎದುರಾಗಿದ್ದರಿಂದ ಒಂದಿಷ್ಟು ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ. ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಸಿಬ್ಬಂದಿ (NDRF) ಸುರಂಗ ಪ್ರವೇಶಿಸಿದ್ದಾರೆ. ಅವರನ್ನು ಹೊರಗೆ ತಂದ ನಂತರ 41 ಹಾಸಿಗೆಗಳ ತಾತ್ಕಾಲಿಕ (Temporary Hospital) ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗಳು ಸಿದ್ಧವಾಗಿವೆ. ಈ ಮಧ್ಯೆ ಸುರಂಗದಲ್ಲಿ ಸಿಲುಕಿರುವ ತನ್ನ 15 ಕಾರ್ಮಿಕರನ್ನು ಏರ್ ಲಿಫ್ಟ್ ಮಾಡಲು ಜಾರ್ಖಂಡ್ ರಾಜ್ಯ ಸರ್ಕಾರ ಮುಂದಾಗಿದೆ.

ನಾವು ಇನ್ನೂ ಆರು ಮೀಟರ್‌ಗಳಷ್ಟು ಡ್ರಿಲ್ಲಿಂಗ್ ಮಾಡಲು ಯಶಸ್ವಿಯಾಗಿದ್ದೇವೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಮುಂದಿನ ಎರಡು ಗಂಟೆಗಳಲ್ಲಿ, ನಾವು ಮುಂದಿನ ಹಂತಕ್ಕೆ ತಯಾರಿ ನಡೆಸಿದಾಗ, ನಾವು ಉಳಿದಿರುವ ಕೆಲಸವನ್ನು ಮುಗಿಸಲು ಸಾಧ್ಯವಾಗಬಹುದು ಎಂದು ನಿರೀಕ್ಷಿಸುತ್ತಿದ್ದೇವೆ ಎಂದು ಕಾರ್ಯಾಚರಣೆ ಮೇಲುಸ್ತುವಾರಿಗೆ ನಿಯೋಜಿಸಲಾಗಿರುವ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಭಾಸ್ಕರ್ ಖುಲ್ಬೆ ಅವರು ತಿಳಿಸಿದ್ದಾರೆ. ಕಾರ್ಮಿಕರನ್ನು ತಲುಪಲು ಅಡ್ಡಿಯಾಗಿರುವ ಜಾಗದಲ್ಲಿ ಶೇ.67ರಷ್ಟು ಡ್ರಿಲ್ಲಿಂಗ್ ಪೂರ್ತಿಯಾಗಿದೆ ಎಂದು ಅವರು ತಿಳಿಸಿದ್ದಾರೆ

ಬುಧವಾರ ಮುಂಜಾನೆ ಉತ್ತರಾಖಂಡ್‌ನ ರಸ್ತೆ ಮತ್ತು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ಮಹಮೂದ್ ಅಹ್ಮದ್, ಮಧ್ಯರಾತ್ರಿ 12.45ಕ್ಕೆ ಕೆಲಸ ಶುರು ಮಾಡಿದ ಆಗರ್(ಡ್ರಿಲ್ಲಿಂಗ್ ಮಷಿನ್) ಇದುವರೆಗೆ 18 ಮೀಟರ್ ಕೊರೆದಿದೆ ಎಂದು ಹೇಳಿದ್ದರು. ಈ ವರೆಗೆ 39 ಮೀಟರ್ ಡ್ರಿಲ್ಲಿಂಗ್ ಪೂರ್ತಿಯಾಗಿದೆ. ಅಂದಾಜಿನ ಪ್ರಕಾರ ಕಾರ್ಮಿಕರ 57 ಮೀಟರ್ ಭೂಗತದಲ್ಲಿದ್ದಾರೆ. ಹಾಗಾಗಿ ಇನ್ನು 18 ಮೀಟರ್ ಡ್ರಿಲ್ಲಿಂಗ್ ಪೂರ್ತಿಯಾದರೆ ಕಾರ್ಮಿಕರ ರಕ್ಷಣೆ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದರು.

ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ರೂಪಿಸಲಾಗುತ್ತಿರುವ ಡ್ರಿಲ್ಲಿಂಗ್ ಹೋಲ್‌ನಲ್ಲಿ ಪೈಪ್‌ಗಳನ್ನು ವೆಲ್ಡಿಂಗ್ ಮಾಡುವುದು ಮಹತ್ವದ ಕೆಲಸವಾಗಿದೆ. ಇದಕ್ಕಾಗಿ ಸಾಕಷ್ಟು ಸಮಯ ಬೇಕಾಗುತ್ತದೆ. ಹಾಗೆ ನೋಡಿದರೆ, ಡ್ರಿಲ್ ಮಾಡಲು ಅಷ್ಟೇನೂ ಸಮಯ ಬೇಕಾಗಿಲ್ಲ. ಪೈಪ್‌ಗಳನ್ನು ವೆಲ್ಡಿಂಗ್ ಮಾಡಲು ಸಾಕಷ್ಟು ಸಮಯಬೇಕಾಗುತ್ತದೆ. 18 ಮೀಟರ್ ಪೈಪ್‌ಗಳನ್ನು ಜೋಡಿಸಲು ಕಳೆದ ರಾತ್ರಿಯಿಂದ ಈವರೆಗೆ 15 ಗಂಟೆಗಳು ಬೇಕಾದವು ಎಂದು ಅವರು ತಿಳಿಸಿದ್ದಾರೆ. ಹೆಚ್ಚುವರಿಯಾಗಿ ಸುರಂಗದೊಳಗೆ 21 ಮೀಟರ್‌ನಷ್ಟು ದೂರ 800 ಎಂಎಂ ಪೈಪ್ ಕೂಡ ತುರುಕಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಅಡೆತಡೆಗಳಿಲ್ಲದಿದ್ದರೆ, ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಕೆಲವು ಶುಭ ಸುದ್ದಿಗಳು ಸಿಗಬಹುದು. ಕಬ್ಬಿಣದ ರಾಡ್ ಕೂಡ ಅವಶೇಷಗಳೊಂದಿಗೆ ಬಂದಿದೆ. ಇದು (ರಾಡ್) ನಮಗೆ ಯಾವುದೇ ತೊಂದರೆಗಳನ್ನು ಉಂಟುಮಾಡಲಿಲ್ಲ ಎಂದು ನಮಗೆ ಸಂತೋಷವಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಬುಧವಾರ ರಾತ್ರಿ 11 ಗಂಟೆಗೆ ಬಂದ ಸುದ್ದಿಗಳ ಪ್ರಕಾರ, ಡ್ರಿಲ್ಲಿಂಗ್ ಮಾಡುತ್ತಿರುವ ಆಗರ್‌ಗೆ ಬಲವಾದ ಅಡ್ಡಿಯೊಂದು ಎದುರುಗಾಗಿದೆ. ಲೋಹದಷ್ಟು ಬಲಿಷ್ಠವಾದ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ, ರಕ್ಷಣಾ ಕಾರ್ಯಾಚರಣೆ ಮತ್ತುಷ್ಟು ವಿಳಂಬವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

29 ಸುರಂಗಗಳ ಸುರಕ್ಷತೆಗೆ ಆಡಿಟ್ ಮಾಡಲು ಮುಂದಾದ ಸರ್ಕಾರ

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದೇಶದಾದ್ಯಂತ ನಿರ್ಮಾಣ ಹಂತದಲ್ಲಿರುವ ಎಲ್ಲಾ 29 ಸುರಂಗಗಳ ಸುರಕ್ಷತೆ ಮತ್ತು ಅತ್ಯುನ್ನತ ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ಆಡಿಟ್ ಅನ್ನು ಕೈಗೊಳ್ಳಲಿದೆ ಎಂದು ಅದರ ಅಧಿಕೃತ ಹೇಳಿಕೆ ಬುಧವಾರ ತಿಳಿಸಿದೆ. ಎನ್‌ಎಚ್‌ಎಐ ಅಧಿಕಾರಿಗಳು, ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ತಜ್ಞರ ತಂಡ ಮತ್ತು ಇತರ ಸುರಂಗ ತಜ್ಞರು ಈಗ ನಡೆಯುತ್ತಿರುವ ಸುರಂಗ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ ಮತ್ತು ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರಂತೆ. ನವೆಂಬರ್ 12ರಂದು ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದ ಕುಸಿತ ಹಾಗೂ ಅದರ ಒಳಗೆ 41 ಕಾರ್ಮಿಕರು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಈ ಕ್ರಮ ಕೈಗೊಳ್ಳುತ್ತಿದೆ.

ದೇಶದಾದ್ಯಂತ ಸುಮಾರು 79 ಕಿ.ಮೀ ಉದ್ದದ ಒಟ್ಟು 29 ಸುರಂಗಗಳು ನಿರ್ಮಾಣ ಹಂತದಲ್ಲಿವೆ. ಹಿಮಾಚಲ ಪ್ರದೇಶದಲ್ಲಿ 12, ಜಮ್ಮು ಮತ್ತು ಕಾಶ್ಮೀರದಲ್ಲಿ ಆರು, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲಿ ತಲಾ ಎರಡು, ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಢ, ಉತ್ತರಾಖಂಡ ಮತ್ತು ದೆಹಲಿಯಲ್ಲಿ ತಲಾ ಒಂದೊಂದು ಸುರಂಗಗಳಿವೆ. NHAI ಸಹ ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL)ನೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಒಪ್ಪಂದದ ಭಾಗವಾಗಿ, ಸುರಂಗ ನಿರ್ಮಾಣ ಮತ್ತು NHAI ಯೋಜನೆಗಳ ಇಳಿಜಾರು ಸ್ಥಿರೀಕರಣಕ್ಕೆ ಸಂಬಂಧಿಸಿದ ವಿನ್ಯಾಸ, ರೇಖಾಚಿತ್ರ ಮತ್ತು ಸುರಕ್ಷತೆ ಅಂಶಗಳನ್ನು KRCL ಪರಿಶೀಲಿಸಲಿದೆ.

ಈ ಸುದ್ದಿಯನ್ನೂ ಓದಿ: Tunnel Collapse: ಕಾರ್ಮಿಕರ ರಕ್ಷಣೆಗೆ 15 ದಿನ ಬೇಕಾಗಬಹುದು! ಯೋಗ ಮಾಡಲು ಸಲಹೆ

Exit mobile version