Site icon Vistara News

Uttarkashi Tunnel: ಸುರಂಗದಲ್ಲಿರುವ ಎಲ್ಲ 41 ಜನ ಸೇಫ್;‌ ಕೆಲವೇ ಕ್ಷಣದಲ್ಲಿ ಎಲ್ಲರ ರಕ್ಷಣೆ

uttarkashi tunnel collapse

Uttarakashi Tunnel Rescue: All 41 labours in tunnel are safe, NDRF meets them

ಡೆಹ್ರಾಡೂನ್:‌ ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ (Uttarkashi Tunnel) ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ನಡೆಯುತ್ತಿರುವ ಕಾರ್ಯಾಚರಣೆಗೆ ಕೊನೆಗೂ ಮಹತ್ವದ ಮುನ್ನಡೆ ಸಿಕ್ಕಿದೆ. ಸುರಂಗದಲ್ಲಿ ಸಿಲುಕಿದ ಎಲ್ಲ 41 ಕಾರ್ಮಿಕರೂ ಸುರಕ್ಷಿತರಾಗಿದ್ದಾರೆ ಎಂದು ಎನ್‌ಡಿಆರ್‌ಎಫ್‌ ಮೂಲಗಳು ತಿಳಿಸಿವೆ. ಅದರಲ್ಲೂ, ಎನ್‌ಡಿಆರ್‌ಎಫ್‌ ಸಿಬ್ಬಂದಿಯು (NDRF) ಕಾರ್ಮಿಕರ ಜತೆ ಸಂಪರ್ಕ ಸಾಧಿಸಿದ್ದು, ಕೆಲವೇ ಕ್ಷಣಗಳಲ್ಲಿ ಎಲ್ಲರನ್ನೂ ಹೊರಗೆ ಕರೆತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸುಮಾರು 17 ದಿನಗಳ ಸಾವು- ಬದುಕಿನ ಹೋರಾಟ ನಡೆಸಿದ ಕಾರ್ಮಿಕರ ರಕ್ಷಣೆಗೆ ಮಂಗಳವಾರ ಮುನ್ನಡೆ ಸಿಕ್ಕಿದೆ. ಸುರಂಗ ಕೊರೆಯುವ ಕಾರ್ಯಾಚರಣೆ ವೇಳೆ ಯಂತ್ರಗಳು ಮುರಿದ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಕೊನೆಗೆ ರ‍್ಯಾಟ್‌ ಹೋಲ್‌ ಮೈನಿಂಗ್‌ (ಒಬ್ಬರೇ ವ್ಯಕ್ತಿ ಹೋಗಿ-ಬರುವಷ್ಟು ರಂಧ್ರ ಕೊರೆಯುವುದು) ಮೂಲಕ ಕಾರ್ಮಿಕರನ್ನು ತಲುಪುವಷ್ಟು ರಂಧ್ರ ಕೊರೆಯಲಾಗಿದೆ. ಶೀಘ್ರದಲ್ಲೇ ಆ ರಂಧ್ರದಿಂದ ಕಾರ್ಮಿಕರನ್ನು ಹೊರಗೆ ಕರೆತರಲಾಗುತ್ತದೆ ಎಂದು ತಿಳಿದುಬಂದಿದೆ.

ಸುರಂಗದ ಹೊರಗೆ ಆಂಬುಲೆನ್ಸ್‌ಗಳು

ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ

ಉತ್ತರಕಾಶಿ ಸುರಂಗದಲ್ಲಿಯೇ ತಾತ್ಕಾಲಿಕವಾಗಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಅಲ್ಲದೆ, ಏಮ್ಸ್‌ ವೈದ್ಯರ ನಾಲ್ಕು ತಂಡಗಳು ಸುರಂಗದ ಬಳಿಯೇ ಬೀಡುಬಿಟ್ಟಿವೆ. ಯಾವಾಗ ಬೇಕಾದರೂ ಜನರನ್ನು ಹೊರಗೆ ಕರೆತರುವ ಸಾಧ್ಯತೆ ಇರುವುದರಿಂದ ಅವರ ಆರೋಗ್ಯವನ್ನು ಕ್ಷಿಪ್ರವಾಗಿ ತಪಾಸಣೆ ಮಾಡಲು ಸುರಂಗದಲ್ಲಿಯೇ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಸುರಂಗದ ಹೊರಗೆ ಸುಮಾರು 16 ಆಂಬುಲೆನ್ಸ್‌ಗಳು ಕಾಯುತ್ತಿದ್ದು, ತಪಾಸಣೆ ಬಳಿಕ ಅವರನ್ನು ಬೇರೊಂದು ಆಸ್ಪತ್ರೆಗೆ ಸಾಗಿಸಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: Uttarkashi Tunnel collapse: ಕುಸಿದ ಸುರಂಗದೊಳಗೆ ಸಿಲುಕಿರುವ ಮೂವರು ಸೋದರರಿಗೆ ಹೊರಗೆ ನಡೆದ ದುರಂತದ ಅರಿವೇ ಇಲ್ಲ!

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿರಲಿಲ್ಲ. ಕೊನೆಗೆ 17 ದಿನಗಳ ಬಳಿಕ ಎಲ್ಲ ಕಾರ್ಮಿಕರ ರಕ್ಷಣೆಯು ಕೊನೆಯ ಹಂತ ತಲುಪಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version