Site icon Vistara News

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಉತ್ತರಾಖಂಡ ಸಂಪುಟ ಗ್ರೀನ್‌ ಸಿಗ್ನಲ್;‌ ಜಾರಿಯೊಂದೇ ಬಾಕಿ

Pushkar Singh Dhami With UCC Draft Report

Uttarakhand Cabinet approves Uniform Civil Code draft, Bill likely to be tabled on Feb 6

ಡೆಹ್ರಾಡೂನ್:‌ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗೆ ಪುಷ್ಕರ್‌ ಸಿಂಗ್‌ ಧಾಮಿ (Pushkar Singh Dhami) ನೇತೃತ್ವದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಸರ್ಕಾರ ರಚಿಸಿದ ಏಕರೂಪ ನಾಗರಿಕ ಸಂಹಿತೆ ತಜ್ಞರ ಸಮಿತಿಯ (Uniform Civil Code Expert Committee) ಕರಡು ಜಾರಿಗೆ ಸಂಪುಟ ಸಭೆ ಗ್ರೀನ್‌ ಸಿಗ್ನಲ್‌ ನೀಡಿದ್ದು, ಫೆಬ್ರವರಿ 6ರಂದು ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ವಿಧೇಯಕ ಮಂಡಿಸಲಿದೆ. ವಿಧೇಯಕಕ್ಕೆ ಅಂಗೀಕಾರ ದೊರೆತರೆ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದ ಮೊದಲ ರಾಜ್ಯ ಎಂಬ ಖ್ಯಾತಿಗೆ ಉತ್ತರಾಖಂಡ ಭಾಜನವಾಗಲಿದೆ.

ತಜ್ಞರ ಸಮಿತಿ ಚೇರ್ಮನ್‌ ನ್ಯಾ. ರಂಜನಾ ಪ್ರಕಾಶ್‌ ದೇಸಾಯಿ ಅವರ ನೇತೃತ್ವದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕರಡು ರಚಿಸಲಾಗಿದೆ. ಫೆಬ್ರವರಿ 2ರಂದು ಬೆಳಗ್ಗೆ 11 ಗಂಟೆಗೆ ಕರಡನ್ನು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಕರಡು ಪ್ರತಿಯನ್ನು ನೀಡಲಾಗಿದೆ. ಈಗ ಕರಡು ಪ್ರತಿಗೆ ಸಂಪುಟ ಸಭೆಯ ಅನುಮೋದನೆ ದೊರೆತಿದೆ. ಯುಸಿಸಿ ಜಾರಿಗಾಗಿಯೇ ರಾಜ್ಯ ಸರ್ಕಾರವು ಫೆಬ್ರವರಿ 5ರಿಂದ 8ರವರೆಗೆ ವಿಶೇಷ ಅಧಿವೇಶನ ಕರೆದಿದೆ. ಫೆಬ್ರವರಿ 6ರಂದು ವಿಧೇಯಕ ಮಂಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಉತ್ತರಾಖಂಡದಲ್ಲಿ ಯುಸಿಸಿ ಜಾರಿಗಾಗಿ ಸಾರ್ವಜನಿಕರಿಂದ ಸಲಹೆ-ಆಕ್ಷೇಪಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ, ಸುಮಾರು 2.33 ಲಕ್ಷ ಜನ ಯುಸಿಸಿ ಕುರಿತು ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡಿದ್ದರು. ಇದಾದ ಬಳಿಕವೇ ಯುಸಿಸಿ ಜಾರಿಗಾಗಿ ರಾಜ್ಯ ಸರ್ಕಾರವು ತಜ್ಞರ ಸಮಿತಿ ರಚಿಸಿತ್ತು. ಅದರಂತೆ, ತಜ್ಞರ ಸಮಿತಿಯು 740 ಪುಟಗಳ ಕರಡು ವರದಿಯನ್ನು ತಯಾರಿಸಿ, ರಾಜ್ಯ ಸರ್ಕಾರಕ್ಕೆ ನೀಡಿದೆ. ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಈಗಾಗಲೇ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆಯೇ, ವಿಧೇಯಕ ಮಂಡನೆಗೆ ಉತ್ತರಾಖಂಡ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ವಿರೋಧಿಸಿ ನಿರ್ಣಯ ಅಂಗೀಕರಿಸಿದ ಕೇರಳ ರಾಜ್ಯ ವಿಧಾನಸಭೆ

ಕರಡಿನಲ್ಲಿ ಏನಿದೆ?

ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಲ್ಲಾ ಧರ್ಮಗಳಿಗೂ ಅನ್ವಯವಾಗುವ ಒಂದು ಕಾನೂನನ್ನು ರೂಪಿಸುವ ಕುರಿತು ಕರಡಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ, ವಿವಾಹ ನೋಂದಣಿ, ವಿಚ್ಛೇದನ, ಆಸ್ತಿ ಹಕ್ಕುಗಳು, ಅಂತರ-ರಾಜ್ಯ ಆಸ್ತಿ ಹಕ್ಕುಗಳು, ನಿರ್ವಹಣೆ, ಮಕ್ಕಳ ಪಾಲನೆ ಇತ್ಯಾದಿಗಳಂತಹ ವೈಯಕ್ತಿಕ ಕಾನೂನುಗಳಲ್ಲಿ ಏಕರೂಪತೆ ತರುವ ಉದ್ದೇಶ ಹೊಂದಿದೆ. ಪ್ರಸ್ತಾವಿತ ಶಾಸನವು ಮದುವೆಯ ಯಾವುದೇ ಧಾರ್ಮಿಕ ಸಂಪ್ರದಾಯಗಳನ್ನು ಅಥವಾ ಇತರ ಆಚರಣೆಗಳನ್ನು ಸ್ಪರ್ಶಿಸಿಲ್ಲ. ಲಿವ್-ಇನ್ ಸಂಬಂಧಗಳ ನೋಂದಣಿ ಕೂಡ ಕಡ್ಡಾಯವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version