Site icon Vistara News

Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು, ಬಾಬಾ ರಾಮದೇವ್‌ ವಿರುದ್ಧ ಬಿತ್ತು ಕೇಸ್

Kanwar Yatra

Kanwar Yatra

ಡೆಹ್ರಾಡೂನ್:‌ ಜನರ ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ ಸಂಸ್ಥೆ (Patanjali Ayurved) ಮುಖ್ಯಸ್ಥ ಬಾಬಾ ರಾಮದೇವ್‌ (Baba Ramdev) ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ (Acharya Balkrishna) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪತಂಜಲಿ (Patanjali) ಸಂಸ್ಥೆಯ 14 ಉತ್ಪನ್ನಗಳ ಪರವಾನಗಿಯನ್ನು ಉತ್ತರಾಖಂಡ ಸರ್ಕಾರವು (Uttarakhand Government) ರದ್ದುಗೊಳಿಸಿದೆ.

ಪತಂಜಲಿ ಉತ್ಪನ್ನಗಳ ಪರವಾನಗಿ ರದ್ದುಗೊಳಿಸುವ ಜತೆಗೆ ಡ್ರಗ್ಸ್‌ ಆ್ಯಂಡ್‌ ಮ್ಯಾಜಿ ರೆಮೆಡೀಸ್‌ ಆ್ಯಕ್ಟ್‌ನ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ಕೂಡ ದಾಖಲಿಸಲಾಗಿದೆ. ಜನರ ದಾರಿ ತಪ್ಪಿಸುವ ರೀತಿಯ ಜಾಹೀರಾತು ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಭೀತಿ ಎದುರಿಸುತ್ತಿರುವ ಕೇಸ್‌ ಕುರಿತು ಕೂಡ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಇದರ ಮಧ್ಯೆಯೇ ಪತಂಜಲಿ ಉತ್ಪನ್ನಗಳ ಪರವಾನಗಿ ರದ್ದುಗೊಳಿಸಿರುವುದು ಬಾಬಾ ರಾಮದೇವ್‌ ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ.

ಪತಂಜಲಿ ಆಯುರ್ವೇದ ಸಂಸ್ಥೆಯ ಉತ್ಪನ್ನಗಳ ದಕ್ಷತೆ ಹಾಗೂ ಅವುಗಳ ದಕ್ಷತೆ ಕುರಿತು ನೀಡಿರುವ ಜಾಹೀರಾತಿಗೂ ತಾಳೆಯಾಗದ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಪರವಾನಗಿ ರದ್ದು ಕುರಿತು ಇದುವರೆಗೆ ಉತ್ತರಾಖಂಡ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿಲ್ಲ.

ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು (IMA) ಅರ್ಜಿ ಸಲ್ಲಿಸಿದೆ. ಪತಂಜಲಿ ಸಂಸ್ಥೆಯು ಕೊರೊನಾ ನಿರೋಧಕ ಲಸಿಕೆ ಹಾಗೂ ಆಧುನಿಕ ಔಷಧ ಪದ್ಧತಿ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದೆ. ಅಷ್ಟೇ ಅಲ್ಲ, ಅಲೋಪಥಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಜನರ ದಾರಿ ತಪ್ಪಿಸುವ ರೀತಿ ಪತಂಜಲಿ ಸಂಸ್ಥೆಯು ಜಾಹೀರಾತುಗಳನ್ನು ನೀಡುತ್ತಿದೆ. ಇದು ಡ್ರಗ್ಸ್‌ ಆ್ಯಂಡ್‌ ಮ್ಯಾಜಿಕ್‌ ರೆಮೆಡೀಸ್‌ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಐಎಂಎ ಅರ್ಜಿ ಸಲ್ಲಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್‌ ಅಮಾನುಲ್ಲಾ ಅವರು ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಬ್ಬರೂ ಸುಪ್ರೀಂ ಕೋರ್ಟ್‌ಗೆ ತೆರಳಿ ಕ್ಷಮೆಯಾಚಿಸಿದರೂ ಕೇಳಿರಲಿಲ್ಲ. ಕೊನೆಗೆ ಪತ್ರಿಕೆಯಲ್ಲಿ ಜಾಹೀರಾತು ಹೊರಡಿಸಿ ಇಬ್ಬರೂ ಕ್ಷಮೆ ಕೇಳುವಂತೆ ಮಾಡಿದ್ದರು.

ಇದನ್ನೂ ಓದಿ: Baba Ramdev: ನೀವೇನು ಅಮಾಯಕರಲ್ಲ, ಕ್ಷಮಿಸಲ್ಲ; ಬಾಬಾ ರಾಮದೇವ್‌ಗೆ ಸುಪ್ರೀಂ ಚಾಟಿ!

Exit mobile version