Site icon Vistara News

ಉತ್ತರಾಖಂಡ ಸುರಂಗದಲ್ಲಿ ‌’ಎಸ್ಕೇಪ್‌ ರೂಟ್’ ಇಲ್ಲ; 41 ಜನಕ್ಕೆ ಅಪಾಯದ ಬೆನ್ನಲ್ಲೇ ಹಗರಣದ ವಾಸನೆ!

Tunnel Collapses

ಡೆಹ್ರಾಡೂನ್:‌ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ (Uttarkashi District) ಸುರಂಗ ಕುಸಿದು (Uttarakhand Tunnel Collapse) ಒಂದು ವಾರ ಆಗುತ್ತಿದೆ. ಇದುವರೆಗೆ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸುರಂಗದ ಒಳಗೆ ಸಿಲುಕಿದವರ ಸಂಪರ್ಕ ಸಾಧಿಸಿ, ಅವರಿಗೆ ಅನ್ನ, ನೀರು ಕೊಟ್ಟರೂ ಅವರನ್ನು ಹೊರಗೆ ಕರೆತರಲು ಆಗುತ್ತಿಲ್ಲ. ಅತ್ಯಾಧುನಿಕ ಡ್ರಿಲ್‌ಗಳನ್ನು ಬಳಸಿದರೂ ಕಾರ್ಯಾಚರಣೆ ಯಶಸ್ವಿಯಾಗುತ್ತಿಲ್ಲ. ಇದರ ಬೆನ್ನಲ್ಲೇ, ಸುರಂಗ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

ಹೌದು, ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ಸುರಂಗದಲ್ಲಿ ತುರ್ತು ಸಂದರ್ಭಗಳಲ್ಲಿ ಪರಾರಿಯಾಗುವ ಮಾರ್ಗವನ್ನೇ (ಎಸ್ಕೇಪ್‌ ರೂಟ್)‌ ನಿರ್ಮಿಸಿಲ್ಲ. ಸುರಂಗ ನಿರ್ಮಾಣದ ನಕ್ಷೆಯಲ್ಲಿ ಎಸ್ಕೇಪ್‌ ರೂಟ್‌ ಬಗ್ಗೆ ಉಲ್ಲೇಖವಿದ್ದರೂ, ಅದನ್ನು ನಿರ್ಮಿಸಿಲ್ಲ. ಹಾಗೊಂದು ವೇಳೆ, ಎಸ್ಕೇಪ್‌ ರೂಟ್‌ ನಿರ್ಮಿಸಿದ್ದರೆ 41 ಕಾರ್ಮಿಕರು ಸುಲಭವಾಗಿ ಹೊರಬರುತ್ತಿದ್ದರು. ಎಸ್ಕೇಪ್‌ ರೂಟ್‌ ಇಲ್ಲದ ಕಾರಣಕ್ಕಾಗಿಯೇ ಕಾರ್ಮಿಕರು ಒಳಗೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೆಯೇ, ಸುರಂಗ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಎಸ್ಕೇಪ್‌ ರೂಟ್‌ ಇಲ್ಲದಿರುವುದೇ ಸಾಕ್ಷಿ ಎಂಬ ಆರೋಪಗಳು ಕೇಳಿಬರುತ್ತಿವೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಸುಮಾರು 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿದೆ. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಇಷ್ಟಾದರೂ ಜನರನ್ನು ಹೊರಗೆ ತರಲು ಆಗುತ್ತಿಲ್ಲ. ಹಲವು ಕಾರಣಗಳಿಂದಾಗಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಕುಟುಂಬಸ್ಥರು ಅಧಿಕಾರಿಗಳು, ಸಿಬ್ಬಂದಿ, ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಇದನ್ನೂ ಓದಿ: Tunnel Collapse: ಸುರಂಗ ಕೊರೆಯುವ ಯತ್ನ ವಿಫಲ; 40 ಕಾರ್ಮಿಕರ ಪ್ರಾಣ ಕ್ಷಣಕ್ಷಣಕ್ಕೂ ಅಪಾಯದತ್ತ

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದಾರೆ. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಭೂಕುಸಿತ, ಡ್ರಿಲ್ಲಿಂಗ್‌ ಯಂತ್ರಗಳು ಕೈಕೊಟ್ಟಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರ್ಮಿಕರ ರಕ್ಷಣೆಯು ಕಷ್ಟವಾಗುತ್ತಿದೆ. ಇದರಿಂದಾಗಿ ಕಾರ್ಮಿಕರ ಕುಟುಂಬಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version