Site icon Vistara News

Tunnel Collapse: ಕಾರ್ಯಾಚರಣೆ ಹಠಾತ್‌ ಸ್ಥಗಿತ, ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ರಕ್ಷಣೆ ಸಾಧ್ಯತೆ ಇನ್ನೂ ಕ್ಷೀಣ

Uttarakhand tunnel rescue

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಕುಸಿದ ಸುರಂಗದಲ್ಲಿ (Tunnel Collapse) ಕಾರ್ಮಿಕರು ಸಿಕ್ಕಿಬಿದ್ದು 150 ಗಂಟೆಗಳಿಗೂ ಅಧಿಕ ಕಾಲ ಕಳೆದಿದ್ದು, ಕಾರ್ಯಾಚರಣೆಯನ್ನು (rescue operation) ನಿನ್ನೆ ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲಾಯಿತು. ಇದರೊಂದಿಗೆ ಒಳಗಿದ್ದವರು ಬದುಕುಳಿದಿದ್ದಾರೆಯೇ ಇಲ್ಲವೇ ಎಂಬ ಅನುಮಾನ ಮೂಡಿದೆ.

ಸುಮಾರು 150 ಗಂಟೆಗಳಿಂದ ಸುರಂಗದಲ್ಲಿ 40 ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಪಾರು ಮಾಡಲು ದೈತ್ಯ ಡ್ರಿಲ್ ಯಂತ್ರ ತರಿಸಿ ಅಗೆಯಲಾಗುತ್ತಿದೆ. ಆದರೆ ನಿನ್ನೆ ಸಂಜೆ ಹಠಾತ್ ಬಿರುಕಿನ ಶಬ್ದ ಕೇಳಿದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಡ್ರಿಲ್ಲಿಂಗ್ ಯಂತ್ರ ನಿಂತುಹೋಯಿತು. ಸ್ಥಳಕ್ಕೆ ಇನ್ನೊಂದು ಭಾರಿ ಡ್ರಿಲ್ ಯಂತ್ರ ತರಿಸಲಾಗಿದ್ದು, ಶೀಘ್ರದಲ್ಲೇ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ಸುರಂಗದ ಒಂದು ಭಾಗವು ಕುಸಿದದ್ದರಿಂದ ಒಳಗಿದ್ದ 40 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ನಿನ್ನೆಯವರೆಗೂ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿತ್ತು. ಸ್ಟೀಲ್ ಪೈಪ್‌ಗಳ ಮೂಲಕ ಅವರಿಗೆ ಆಹಾರ ಮತ್ತು ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಕ್ಕಿಬಿದ್ದ ಕಾರ್ಮಿಕರ ಕುಟುಂಬಗಳು ಅಪಘಾತ ಸ್ಥಳಕ್ಕೆ ಆಗಮಿಸಿದ್ದು, ಭರವಸೆ ಕಳೆದುಕೊಂಡಿದ್ದಾರೆ. ಆರೋಗ್ಯ ಹದಗೆಡುವ ಮುನ್ನ ಕಾರ್ಮಿಕರನ್ನು ಶೀಘ್ರವಾಗಿ ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸುರಂಗದೊಳಗೆ ಬಂಧಿತರಾಗಿರುವ ಕಾರ್ಮಿಕರಿಗೆ ದೀರ್ಘಾವಧಿಯ ಸುರಂಗಬಂಧನದ ಒತ್ತಡವು ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆ ಉಂಟುಮಾಡಿರಬಹುದು ಎಂದಿರುವ ವೈದ್ಯರು, ಅವರಿಗೆ ಸಮಗ್ರ ಪುನರ್ವಸತಿ ಅಗತ್ಯವನ್ನು ಒತ್ತಿಹೇಳಿದ್ದಾರೆ.

ನವೆಂಬರ್ 12ರಂದು, ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದು, 40 ಕಟ್ಟಡ ಕಾರ್ಮಿಕರು ಅವಶೇಷಗಳೊಳಗೆ ಸಿಲುಕಿಕೊಂಡರು. ತೆವಳಿ ಹೊರಬಹುದಾದಂತೆ ಪೈಪ್‌ಗಳನ್ನು ಒಳತಳ್ಳಲು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು. ಮೇಲಿನಿಂದ ಬೀಳುತ್ತಿರುವ ಪರ್ವತದ ಮಣ್ಣಿನಿಂದಾಗಿ ಅದೂ ವಿಫಲವಾಗಿದೆ. ಹೀಗಾಗಿ ಅವರನ್ನು ತಲುಪುವ ಪ್ರಯತ್ನಗಳು ನಿಧಾನಗೊಂಡವು. ನಂತರ ಡ್ರಿಲ್‌ ಯಂತ್ರಗಳನ್ನು ತರಿಸಿ ಅಗೆಯಲು ತೊಡಗಿದ್ದಾರೆ. ಶುಕ್ರವಾರ ಸಂಜೆ “ದೊಡ್ಡ ಪ್ರಮಾಣದ ಬಿರುಕು ಶಬ್ದ” ಕೇಳಿದ ನಂತರ ಕೊರೆಯುವ ಕಾರ್ಯಾಚರಣೆ ಸ್ಥಗಿತಗೊಂಡವು. ವಾಯುಪಡೆಯು ಇಂದೋರ್‌ನಿಂದ C-130 ಹರ್ಕ್ಯುಲಸ್ ಮಿಲಿಟರಿ ವಿಮಾನದಲ್ಲಿ ಎರಡನೇ ದೈತ್ಯ ಯಂತ್ರವನ್ನು ತಂದಿದೆ.

ಇದನ್ನೂ ಓದಿ: Tunnel Collapse: ಸುರಂಗ ಕೊರೆಯುವ ಯತ್ನ ವಿಫಲ; 40 ಕಾರ್ಮಿಕರ ಪ್ರಾಣ ಕ್ಷಣಕ್ಷಣಕ್ಕೂ ಅಪಾಯದತ್ತ

Exit mobile version