Site icon Vistara News

ಸುರಂಗದಿಂದ 41 ಕಾರ್ಮಿಕರ ರಕ್ಷಣೆ; ಮುಂದೇನಾಗುತ್ತದೆ ಎಂಬುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Uttarkashi Tunnel Rescue and Makeshift hospital

ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಸುಮಾರು 17 ದಿನ ನೂರಾರು ಸಿಬ್ಬಂದಿಯ ಫಲವಾಗಿ ಎಲ್ಲ ಕಾರ್ಮಿಕರನ್ನು ಸುರಂಗದ ಅವಶೇಷಗಳಿಂದ ರಕ್ಷಣೆ ಮಾಡಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ಕೇಂದ್ರ ಸಚಿವ ಜನರಲ್‌ ವಿ.ಕೆ. ಸಿಂಗ್‌ ಅವರು ಸ್ಥಳಕ್ಕೆ ಆಗಮಿಸಿದ್ದು, ಕಾರ್ಮಿಕರ ಆರೋಗ್ಯ ವಿಚಾರಿಸಿದ್ದಾರೆ. ಇನ್ನು, 41 ಕಾರ್ಮಿಕರನ್ನು ಸುರಂಗದಿಂದ ಹೊರತೆಗೆದರೂ ಕಾರ್ಮಿಕರ ಹಿತದೃಷ್ಟಿಯಿಂದಾಗಿ ಹಲವು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ.

ಆರೋಗ್ಯ ತಪಾಸಣೆ

ಸುರಂಗ ಕುಸಿದು 12 ದಿನಗಳು ಕಳೆದಿದ್ದು, ಇಷ್ಟೂ ದಿನಗಳನ್ನು ಕಾರ್ಮಿಕರು ಸುರಂಗದ ಒಳಗಡೆಯೇ ಕಳೆದಿದ್ದಾರೆ. ಅವರು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗಿದ್ದಾರೆ. ಹಾಗಾಗಿ, ಸುರಂಗದಿಂದ 41 ಕಾರ್ಮಿಕರನ್ನು ಹೊರಗೆ ಕರೆತರುತ್ತಲೇ ವೈದ್ಯರ ತಂಡವು ಅವರ ಆರೋಗ್ಯ ತಪಾಸಣೆ ನಡೆಸಿದೆ. ಇದಾದ ಬಳಿಕ ಅವರನ್ನು ಚಿನ್ಯಾಲಿಸೌರ್‌ನಲ್ಲಿರುವ 41 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗುತ್ತದೆ. ಅಲ್ಲಿಯೂ ಕಾರ್ಮಿಕರ ಆರೋಗ್ಯ ತಪಾಸಣೆ, ಅವರಿಗೆ ಮಾನಸಿಕವಾಗ ಸ್ಥೈರ್ಯ ತುಂಬುವುದು, ಆರೋಗ್ಯದ ಸ್ಥಿತಿಯ ಆಧಾರದ ಮೇಲೆ ಅವರಿಗೆ ಆಹಾರ, ಪಾನೀಯ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ನುರಿತ ವೈದ್ಯರಿಂದ ಕೌನ್ಸೆಲಿಂಗ್‌

ಸುರಂಗದಲ್ಲಿ ಸಿಲುಕಿದ ಎಲ್ಲ ಕಾರ್ಮಿಕರು 17 ದಿನಗಳಲ್ಲಿ ಕುಗ್ಗಿ ಹೋಗಿದ್ದಾರೆ. ಅವರು ಮಾನಸಿಕವಾಗಿ ಸ್ಥೈರ್ಯ ಕಳೆದುಕೊಂಡಿದ್ದಾರೆ. ಹಾಗಾಗಿ, ಅವರು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲು ನುರಿತ ವೈದ್ಯರು ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಲಿದ್ದಾರೆ. ಆ ಮೂಲಕ ಅವರಲ್ಲಿ ಧೈರ್ಯ ತುಂಬುತ್ತಾರೆ ಎಂದು ಮೂಲಗಳು ತಿಳಿಸಿವೆ. ಹಾಗೊಂದು ವೇಳೆ ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದರೆ ರಿಷಿಕೇಶದಲ್ಲಿರುವ ಏಮ್ಸ್‌ಗೂ ಕರೆದೊಯ್ಯಲು ಸಕಲ ವ್ಯವಸ್ಥೆ ಮಾಡಲಾಗಿದೆ. ಚಿನೂಕ್‌ ಹೆಲಿಕಾಪ್ಟರ್‌ ಕೂಡ ನೆರವಿಗೆ ಸಜ್ಜಾಗಿದೆ.

ಇದನ್ನೂ ಓದಿ: ಲೈಫ್‌ಲೈನ್ ಪೈಪ್ ಅಳವಡಿಕೆ, ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಆಹಾರ ರವಾನೆ

ಕುಟುಂಬಸ್ಥರ ಜತೆ ಮಾತುಕತೆ

ಕುಟುಂಬಸ್ಥರ ಸಂಪರ್ಕವೇ ಇಲ್ಲದೆ ಕಾರ್ಮಿಕರು 17 ದಿನ ಕಳೆದಿದ್ದಾರೆ. ಇತ್ತ ಕುಟುಂಬಸ್ಥರು ಕೂಡ ಇವರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಹಾಗಾಗಿ, ವೈದ್ಯಕೀಯ ತಪಾಸಣೆ ಬಳಿಕ ಸುರಂಗದಲ್ಲಿ ಸಿಲುಕಿದ್ದವರ ಜತೆ ಅವರ ಕುಟುಂಬಸ್ಥರು ಮಾತುಕತೆ ನಡೆಸಲಿದ್ದಾರೆ. ಅವರು ಕೂಡ ಕಾರ್ಮಿಕರಿಗೆ ಧೈರ್ಯ ತುಂಬಲಿದ್ದಾರೆ. ಎಲ್ಲ ನೋವಿನಿಂದ ಅವರು ಹೊರಬರಲು ಇದು ನೆರವಾಗಲಿದೆ ಎಂದು ವೈದ್ಯಕೀಯ ಮೂಲಗಳಿಂದ ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version