Site icon Vistara News

ಉತ್ತರಾಖಂಡ ಸುರಂಗ ಕುಸಿತ; ಕೆಲವೇ ಗಂಟೆಗಳಲ್ಲಿ 41 ಜನರ ರಕ್ಷಣೆ, ಆಂಬುಲೆನ್ಸ್‌ ರೆಡಿ

Uttarakhand Tunnel

Uttarakhand tunnel rescue operation in final stages, ambulances wait outside tunnel

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸುರಂಗ ಕುಸಿದು (Uttarakhand Tunnel Collapse), ಸುರಂಗದ ಒಳಗಡೆಯೇ ಸಿಲುಕಿದ 41 ಕಾರ್ಮಿಕರ ರಕ್ಷಣೆಗೆ ನಡೆದ ಸುದೀರ್ಘ ಕಾರ್ಯಾಚರಣೆಯು (Rescue Operation) ಕೊನೆಯ ಹಂತಕ್ಕೆ ಬಂದಿದೆ. ಇನ್ನೇನು ಒಂದು ಅಥವಾ ಎರಡು ಗಂಟೆಯಲ್ಲಿ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ಹೊರಗೆ ಕರೆದುಕೊಂಡು ಬರಲಾಗುತ್ತದೆ. ಅವರ ನೆರವಿಗೆ ಸುರಂಗದ ಹೊರಗಡೆ ಆಂಬುಲೆನ್ಸ್‌ಗಳು ಕಾಯುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಕಾರ್ಮಿಕರು ಕುಟುಂಬಸ್ಥರು ಕೂಡ ಕುತೂಹಲ, ನಿರೀಕ್ಷೆ, ಆತಂಕದೊಂದಿಗೆ ಸುರಂಗದ ಹೊರಗೆ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.

“ರಕ್ಷಣಾ ಕಾರ್ಯಾಚರಣೆಯು ಅಂತಿಮ ಹಂತಕ್ಕೆ ಬಂದಿದೆ. ಸುರಂಗ ಕೊರೆದು, ಅವಶೇಷಗಳನ್ನು ಹೊರತೆಗೆಯುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಒಂದು ಅಥವಾ ಎರಡು ಗಂಟೆಯಲ್ಲಿ ಕಾರ್ಯಾಚರಣೆ ಮುಗಿಯಲಿದೆ. ಪೈಪ್‌ಲೈನ್‌ ಮೂಲಕ ಕಾರ್ಮಿಕರ ಜತೆ ಮಾತನಾಡಲಾಗಿದೆ. ಅವಶೇಷಗಳಲ್ಲಿ ಸಿಲುಕಿದ ಸ್ಟೀಲ್‌ ಪೈಪ್‌ಗಳನ್ನು ಕತ್ತರಿಸಿ ಹೊರತೆಗೆಯಲಾಗಿದೆ. ಕಾರ್ಮಿಕರ ರಕ್ಷಣೆಗೆ ಆಂಬುಲೆನ್ಸ್‌ಗಳು ಕಾಯುತ್ತಿವೆ. ಇದಾದ ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗುತ್ತದೆ” ಎಂದು ರಕ್ಷಣಾ ಕಾರ್ಯಾಚರಣೆ ತಂಡದ ಸದಸ್ಯ ಗಿರೀಶ್‌ ಸಿಂಗ್‌ ರಾವತ್‌ ಮಾಹಿತಿ ನೀಡಿದ್ದಾರೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಸುಮಾರು 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿದೆ. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು ಇಷ್ಟಾದರೂ ಜನರನ್ನು ಹೊರಗೆ ತರಲು ಆಗಿರಲಿಲ್ಲ.

ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರಿಗೆ ಮೊದಲ ಬಾರಿಗೆ ವೆಜ್ ಪುಲಾವ್, ಮಟರ್ ಪನೀರ್ ಪೂರೈಕೆ!

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದಾರೆ. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಭೂಕುಸಿತ, ಡ್ರಿಲ್ಲಿಂಗ್‌ ಯಂತ್ರಗಳು ಕೈಕೊಟ್ಟಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರ್ಮಿಕರ ರಕ್ಷಣೆಯು ಕಷ್ಟವಾಗಿತ್ತು. ವಿದೇಶಿ ತಜ್ಞರನ್ನೂ ಜನರ ರಕ್ಷಣೆಗೆ ಕರೆಸಲಾಗಿದೆ. ಈಗ ಕೊನೆಗೆ ರಕ್ಷಣಾ ಕಾರ್ಯಾಚರಣೆಯು ಅಂತಿಮ ಹಂತಕ್ಕೆ ಬಂದಿದೆ.

Exit mobile version