Site icon Vistara News

ಸುರಂಗ ಕಾರ್ಯಾಚರಣೆ ಯಶಸ್ವಿ; ಮೊದಲ ಹಂತದಲ್ಲಿ 33 ಕಾರ್ಮಿಕರ ರಕ್ಷಣೆ

Uttarkashi tunnel collapse, Rescue operation success

ಡೆಹ್ರಾಡೂನ್:‌ ಉತ್ತರಾಖಂಡದ ಉತ್ತರಕಾಶಿ (Uttarkashi Tunnel Collapse) ಜಿಲ್ಲೆಯಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗುತ್ತಿದೆ(rescue operation). ಮಂಗಳವಾರ ರಾತ್ರಿ ಎಂಟು ಗಂಟೆಗೆ ಒಬ್ಬೊಬ್ಬರಾಗಿ ಸುರಂಗದೊಳಿಗಿಂದ ಕಾರ್ಮಿಕರ ಹೊರ ಬರುತ್ತಿದ್ದಾರೆ. ಈ ವರೆಗೆ 33 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ(Uttarkashi Tunnel Rescue). ಸುರಂಗದ ಅವಶೇಷಗಳಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಕೈಗೊಂಡ ಕಾರ್ಯಾಚರಣೆಯು ಮಂಗಳವಾರ (ನವೆಂಬರ್‌ 28) ಫಲ ಕೊಟ್ಟಿದೆ. ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂದು ಶತಕೋಟಿ ಭಾರತೀಯರು ಮಾಡಿದ ಪ್ರಯತ್ನವು ಯಶಸ್ವಿಯಾಗಿದೆ. ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿದ್ದು, ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸಿಬ್ಬಂದಿ, ಪೊಲೀಸರು, ನುರಿತ ರಕ್ಷಣಾ ಸಿಬ್ಬಂದಿ, ವಿದೇಶಿ ತಂಡಗಳು, ಅತ್ಯಾಧುನಿಕ ಯಂತ್ರಗಳು, ಡ್ರಿಲ್ಲಿಂಗ್‌ ಮಷೀನ್‌ಗಳನ್ನು ಬಳಸಿ ಸತತವಾಗಿ ಕಾರ್ಯಾಚರಣೆ ಕೈಗೊಂಡರೂ ಹಲವು ಅಡೆತಡೆಗಳು ಎದುರಾದವು. ಆದರೆ, ಇದೆಲ್ಲವನ್ನೂ ಮೀರಿ ಕೈಗೊಂಡ ಕಾರ್ಯಾಚರಣೆ ಯಶಸ್ವಿಯಾಗಿದೆ. 41 ಹಾಸಿಗೆಗಳು ಇರುವ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಆಂಬುಲೆನ್ಸ್‌ ಮೂಲಕ ಕಾರ್ಮಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.

ಮುಂದೇನಾಗುತ್ತದೆ?

ಸುರಂಗದ ಬಳಿಯೇ ಇದ್ದ ಏಮ್ಸ್‌ ವೈದ್ಯರ ನಾಲ್ಕು ತಂಡಗಳು ಕಾರ್ಮಿಕರ ಆರೋಗ್ಯ ತಪಾಸಣೆ ಮಾಡುತ್ತಿದೆ. ಸುರಂಗದಲ್ಲಿಯೇ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗಿದ್ದು, ಅಗತ್ಯ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ಆರೋಗ್ಯ ತಪಾಸಣೆ ಬಳಿಕ ಅವರಿಗೆ ದ್ರವರೂಪದಲ್ಲಿ ಅಥವಾ ಅವರ ಆರೋಗ್ಯ ಸ್ಥಿತಿ ಆಧರಿಸಿ ಆಹಾರ ನೀಡಲಾಗುತ್ತದೆ. ಅಲ್ಲದೆ, ಮಾನಸಿಕವಾಗಿ ಕುಗ್ಗಿ ಹೋಗಿರುವ, ಸುರಂಗದಲ್ಲಿಯೇ ಸಿಲುಕಿ ಭಯಭೀತರಾಗಿರುವ ಅವರಿಗೆ ಸಾಂತ್ವನ ಹೇಳಲಾಗುತ್ತದೆ. ಅಲ್ಲದೆ, ಕೌನ್ಸೆಲಿಂಗ್‌ ಕೂಡ ಮಾಡಲಾಗುತ್ತದೆ. ಇದಾದ ಬಳಿಕವೇ ಕಾರ್ಮಿಕರ ಕುಟುಂಬಸ್ಥರನ್ನು ಭೇಟಿ ಮಾಡಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಗತ್ಯ ಬಿದ್ದರೆ ಕಾರ್ಮಿಕರನ್ನು ಕರೆದುಕೊಂಡು ಹೋಗಲು 16 ಆಂಬುಲೆನ್ಸ್‌ಗಳು ಸಿದ್ಧವಾಗಿವೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿರಲಿಲ್ಲ.

ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರಿಗೆ ಮೊದಲ ಬಾರಿಗೆ ವೆಜ್ ಪುಲಾವ್, ಮಟರ್ ಪನೀರ್ ಪೂರೈಕೆ!

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದರು. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭೂಕುಸಿತ, ಡ್ರಿಲ್ಲಿಂಗ್‌ ಯಂತ್ರಗಳು ಕೈಕೊಟ್ಟಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರ್ಮಿಕರ ರಕ್ಷಣೆಯು ಕಷ್ಟವಾಗಿತ್ತು. ವಿದೇಶಿ ತಜ್ಞರನ್ನೂ ಜನರ ರಕ್ಷಣೆಗೆ ಕರೆಸಲಾಗಿತ್ತು. ಈಗ ಕೊನೆಗೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version