Site icon Vistara News

ಮತ್ತೆ ಕೆಟ್ಟು ನಿಂತ ಡ್ರಿಲಿಂಗ್ ಯಂತ್ರ, ಕಾರ್ಮಿಕರ ರಕ್ಷಣೆ ಮತ್ತಷ್ಟು ವಿಳಂಬ

uttarkashi tunnel collapse, again auger machine has broken down

ನವದೆಹಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು (Uttarakhand Tunnel Collapse) ಸಂಕಷ್ಟಕ್ಕೆ ಸಿಲುಕಿರುವ 41 ಕಾರ್ಮಿಕರ ರಕ್ಷಣೆ (Rescue Operation) ಗುರುವಾರ ರಾತ್ರಿ ಹೊತ್ತಿಗೆ ಪೂರ್ಣಗೊಂಡು, ಕಾರ್ಮಿಕರು ಹೊರಗೆ ಬರಲಿದ್ದಾರೆಂದು ನಿರೀಕ್ಷಿಸಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಮತ್ತೆ ವಿಘ್ನ ಎದುರಾಗಿದ್ದು, ಡ್ರಿಲಿಂಗ್ ಕಾರ್ಯಾಚರಣೆಯನ್ನು (Drilling Machine broken) ರಾತ್ರಿ ಸ್ಥಗಿತಗೊಳಿಸಲಾಗಿದೆ. ಕಾರ್ಯಾಚರಣೆ 12ನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕರು (trapped workers) ಯಾವುದೇ ತೊಂದರೆ ಇಲ್ಲದೆ ಬರಲಿ ಎಂದು ದೇಶದ ಜನ ಪ್ರಾರ್ಥಿಸುತ್ತಿದ್ದು, ಇನ್ನೂ ರಕ್ಷಣೆಗೆ ಹರಸಾಹಸ ಮುಂದುವರಿದಿದೆ.

ಸಿಲುಕಿರುವ ಕಾರ್ಮಿಕರನ್ನು ಹೊರ ತರುಲು ಇನ್ನೂ ಕೆಲವೇ ಮೀಟರ್‌ಗಳಷ್ಟು ದೂರವಿದ್ದೇವೆ. ಸಿಲುಕಿರುವ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ದಾರಿ ಮಾಡಿಕೊಡುತ್ತಿದ್ದ ಆಗರ್ ಡ್ರಿಲಿಂಗ್ ಮಷಿನ್ ಕೆಟ್ಟು ನಿಂತಿದ್ದರಿಂದ ಅನಿವಾರ್ಯವಾಗಿ ಗುರುವಾರ ಕಾರ್ಯಾಚಣೆಯನ್ನು ನಿಲ್ಲಿಸಬೇಕಾಯಿತು. ಆಗರ್ ಡ್ರಿಲಿಂಗ್ ಯಂತ್ರವನ್ನು ರಿಪೇರಿ ಮಾಡಲಾಗುತ್ತಿದ್ದು, ನಾಳೆ(ಶುಕ್ರವಾರ) ಮತ್ತೆ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಅಂತಾರಾಷ್ಟ್ರೀಯ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ಗುರುವಾರ ರಾತ್ರಿ ಹೇಳಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಕೂಡ ಈ ವಿಷಯವನ್ನು ಖಚಿತ ಪಡಿಸಿದ್ದಾರೆ.

ಗುರುವಾರ ಏನೇನು ನಡೆಯಿತು, ಯಾರು ಏನು ಹೇಳಿದರು?

ಸುರಂಗದಲ್ಲಿ ಇನ್ನೂ 6-8 ಮೀಟರ್‌ ಅವಶೇಷವನ್ನು ಕೊರೆಯುವುದು ಬಾಕಿ ಇದೆ. ಮತ್ತೆ ಕಾರ್ಯಾಚರಣೆ ಆರಂಭವಾಗಿದ್ದು, ಇನ್ನೂ ಆರು ಮೀಟರ್‌ ಉದ್ದದ ಮೂರು ಪೈಪ್‌ಗಳನ್ನು ಒಳಗೆ ಬಿಡುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಇದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆಯಾಗಿದೆ. ಬುಧವಾರ (ನವೆಂಬರ್‌ 22) ಕಾರ್ಯಾಚರಣೆ ವೇಳೆ ಕಬ್ಬಿಣದ ರಾಡ್‌ಗಳು ಅಡ್ಡ ಬಂದ ಕಾರಣ ವಿಳಂಬವಾಯಿತು. ಆದರೆ, ಗುರುವಾರವೇ ಎಲ್ಲ ಕಾರ್ಮಿಕರನ್ನು ಯಶಸ್ವಿಯಾಗಿ ಹೊರಗೆ ಕರೆತರಲಾಗುತ್ತದೆ” ಎಂದು ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಜತೆ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಮಾತನಾಡಿದ್ದಾರೆ. “ಸತತವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ಕೆಲವೇ ಗಂಟೆಗಳಲ್ಲಿ ನಿಮ್ಮನ್ನೆಲ್ಲ ರಕ್ಷಣೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಎದೆಗುಂದದಿರಿ” ಎಂದು ಧೈರ್ಯ ತುಂಬಿದ್ದಾರೆ. ಇನ್ನು ಕಾರ್ಮಿಕರನ್ನು ಹೊರಗೆ ಕರೆತರುತ್ತಲೇ ಅವರ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಇನ್ನೂ ಆಗಿಲ್ಲ.

ಈ ಸುದ್ದಿಯನ್ನೂ ಓದಿ: Tunnel Collapse: ಕಾರ್ಮಿಕರ ರಕ್ಷಣೆಗೆ 15 ದಿನ ಬೇಕಾಗಬಹುದು! ಯೋಗ ಮಾಡಲು ಸಲಹೆ

Exit mobile version