ಪ್ರೀತಿ ಮಾಡುವವರಿಗೆ ಫೆಬ್ರವರಿ ಎಂದರೆ ಅದೊಂದು ದೊಡ್ಡ ಖುಷಿಯ ತಿಂಗಳು. ಏನೋ ಉತ್ಸಾಹ. ಅದರಲ್ಲೂ ಹೊಸದಾಗಿ ಪ್ರೀತಿಯಲ್ಲಿ ಬಿದ್ದವರಿಗೆ ಆ ಸಂಭ್ರಮ ಇನ್ನೂ ಹೆಚ್ಚು. ಪ್ರೀತಿಯಿಂದ ವಿಮುಖರಾದವರಿಗೆ ಇದು ಏಕಾಕಿತನವನ್ನು ನೀಡುವ, ಬೇಸರವನ್ನುಂಟು ಮಾಡುವ, ಹಳೆಯ ನೆನಪುಗಳೆಲ್ಲ ಸಾಲುಸಾಲಾಗಿ ಮೆರವಣಿಗೆಯಂತೆ ಬರುವ ತಿಂಗಳೂ ಕೂಡ. ಒಟ್ಟಾರೆ, ಇಬ್ಬರ ಸ್ಥಿತಿಯೂ ಗಂಭೀರವೇ. ಇತ್ತೀಚೆಗಿನ ವರ್ಷಗಳಲ್ಲಿ ಪ್ರೇಮಿಗಳ ದಿನ (valentines day) ಎಂಬುದು ಒಂದು ವಾರ ಪೂರ್ತಿ ಆಚರಿಸುವ ಹಬ್ಬವಾಗಿ ಬದಲಾಗಿದೆ. ಅದಕ್ಕೆ ತಕ್ಕನಾಗಿ ಈ ಪ್ರೇಮಿಗಳ ಮನಸ್ಸನ್ನರಿತು, ಮಾರ್ಕೆಟಿಂಗ್ ತಂತ್ರಗಳು ಇಂದು ಸಾಕಷ್ಟು ಪ್ರೇಮಿಗಳ ಕೆಲಸವನ್ನು ಸುಲಭ ಮಾಡಿ ಕೊಡುತ್ತಿವೆ. ಫೆಬ್ರವರಿ 14ರಂದು ಪ್ರೇಮಿಗಳ ದಿನವಾದರೂ, ವಾರಪೂರ್ತಿ ಹಬ್ಬವಾಗಿ ಆಚರಿಸುವ ಉತ್ಸಾಹ ಇರುವವರಿಗಂತೂ ಇದು ರತ್ನ ಕಂಬಳಿ ಹಾಸಿ ಕೊಟ್ಟಂತಿದೆ. ಬನ್ನಿ, ವಾರ ಪೂರ್ತಿ ಪ್ರೇಮಿಗಳ ದಿನ (valentines day) ಆಚರಿಸುವವರಿಗೆ ಪ್ರತಿ ದಿನದ ವಿಶೇಷ ಏನು ಇಲ್ಲಿ ನೋಡೋಣ.
ಫೆಬ್ರವರಿ 7- ರೋಸ್ ಡೇ
ಪ್ರೇಮಿಗಳ ವಾರದ (ವ್ಯಾಲೆಂಟೈನ್ ವೀಕ್) ಮೊದಲ ದಿನವಿದು. ನಿಮಗೆ ಯಾರಾದರೊಬ್ಬರ ಮೇಲೆ ಆಕರ್ಷಣೆಯಿದ್ದರೆ ಅವರಿಗೆ ಗುಲಾಬಿ ಕೊಟ್ಟು ಅಥವಾ ಗುಲಾಬಿ ಹೂಗಳ ಗುಚ್ಛವನ್ನೇ ಕೊಟ್ಟು ತಮ್ಮ ಮನಸ್ಸಿನ ಭಾವನೆಯನ್ನು ತಿಳಿಸಲಿಕ್ಕಾಗಿ ಇರುವ ದಿನ.
ಫೆಬ್ರವರಿ 8- ಪ್ರೊಪೋಸ್ ಡೇ
ನಿಮ್ಮ ಮನದಾಳದ ಭಾವನೆಯನ್ನು ಹೇಳಿದ ಮೇಲೆ, ಇನ್ನೊಂದು ಬದಿಯಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲವೇ? ಇನ್ನೂ ಹೆಚ್ಚು ಸರ್‌ಪ್ರೈಸ್ ಮೂಲಕ ನಿಮ್ಮ ಪ್ರೇಮನಿವೇದನೆ ಮಾಡುವುದಿದ್ದರೆ, ಅದಕ್ಕಾಗಿ ಇರುವ ದಿನವಿದು. ಚಂದದ ರೊಮ್ಯಾಂಟಿಕ್ ಡಿನ್ನರ್ ಕೊಡಿಸಿಯೋ ಇನ್ನೂ ಅರ್ಥಗರ್ಭಿತವಾಗಿ ಪ್ರೊಪೋಸ್ ಮಾಡಲು ಸಕಾಲ.
ಫೆಬ್ರವರಿ 9- ಚಾಕೋಲೇಟ್ ಡೇ
ಚಾಕೋಲೇಟ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ನಿಮ್ಮ ಪ್ರೇಮಿಗೊಂದು ಸಿಫಲ ಚಾಕೋಲೇಟ್ ಕೊಟ್ಟು ಅವರ ಮುಖವರಳುವುದನ್ನು ನೋಡಬೇಕಿದ್ದರೆ, ಇದು ಪರ್ಫೆಕ್ಟ್ ಡೇ. ಚಾಕೋಲೇಟ್ ಎಂದರೆ ಮುಗ್ಧತೆ. ಪ್ರೀತಿಯೊಂದಿಗೆ ಮುಗ್ಧತೆಯೂ ಇದ್ದೇ ಇರುತ್ತದೆ ಅಲ್ಲವೇ. ಅದಕ್ಕಾಗಿಯೇ ಈ ಚಾಕೋಲೇಟ್! ಪ್ರೇಮಿಗಳ ಈ ಕೆಲಸವನ್ನು ಸುಲಭ ಮಾಡಲು ಈಗೆಲ್ಲ ಮಾರುಕಟ್ಟೆಯಲ್ಲಿ ಬೇಕಾದಷ್ಟು ಆಯ್ಕೆಗಳಿವೆ. ತಮ್ಮ ಪ್ರೇಮಿಯ ಹೆಸರು ಕೆತ್ತಿದ ಚಾಕೋಲೇಟ್‌ಗಳು, ಚಾಕೋಲೇಟ್ ಹ್ಯಾಂಪರ್‌ಗಳು, ಬಗೆಬಗೆಯ ರುಚಿಯ ಆಯ್ಕೆಗಳೂ ಬೇಕಾದಷ್ಟು ಸಿಗುತ್ತವೆ.
ಫೆಬ್ರವರಿ 10- ಟೆಡ್ಡಿ ಡೇ
ಟೆಡ್ಡಿ ಬೇರ್ ಹಿಂದಿನಿಂದಲೂ ಬಂದ ಒಂದು ಕ್ಯೂಟ್ ಉಡುಗೊರೆ. ಬಹಳಷ್ಟು ಹುಡುಗಿಯರು ಇಷ್ಟಪಡುವ ಉಡುಗೊರೆಗಳಲ್ಲಿ ಇದೂ ಒಂದು, ನಿಮ್ಮ ಹುಡುಗಿಯ ಹೃದಯ ಕದಿಯಬೇಕಿದ್ದರೆ ದೊಡ್ಡದೊಂದು ಟೆಡ್ಡಿಬೇರ್ ಕೊಡಿ. ನಿಮ್ಮ ನೆನಪಲ್ಲಿ ಅವರು ಟೆಡ್ಡಿ ಬೇರ್ ಅಪ್ಪಿಕೊಂಡರೆ, ನಿಮಗೂ ಪುಳಕ!
ಫೆಬ್ರವರಿ 11- ಪ್ರಾಮಿಸ್ ಡೇ
ಪ್ರೇಮಿಗಳ ನಡುವೆ ನಂಬಿಕೆಯಿರಬೇಕು. ಪರಸ್ಪರ ವಿಶ್ವಾಸವಿರಬೇಕು. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಪ್ರೀತಿಯಲ್ಲಿ ಅತ್ಯಂತ ಮುಖ್ಯ. ಈ ಸಂಬಂಧ ಇನ್ನಷ್ಟು ಗಟ್ಟಿಯಾಗಲು, ಅದು ಮತ್ತೊಂದು ಹಂತಕ್ಕೆ ತಲುಪಲು, ನಿಮ್ಮ ಭವಿಷ್ಯದ ಕನಸನ್ನು ಜೊತೆಯಾಗಿ ಕಾಣಲು ಈ ದಿನ ಸಕಾಲ.
ಫೆಬ್ರವರಿ 12- ಹಗ್ ಡೇ
ಅಪ್ಪುಗೆ ಅಥವಾ ಹಗ್ ಯಾರಿಗೆ ಬೇಡ ಹೇಳಿ! ಪ್ರೀತಿ ಒಂದು ಹಂತ ದಾಟಿದ ತಕ್ಷಣ ಅಪ್ಪುಗೆ ಸಹಜ. ಪ್ರೇಮಿಯ ಅಪ್ಪುಗೆಯಲ್ಲಿ ಕರಗುವುದು ಖಂಡಿತ ಪ್ರತಿಯೊಬ್ಬ ಪ್ರೇಮಿಯ ಬಯಕೆ. ಪ್ರತಿಯೊಬ್ಬರೂ ಈ ಬೆಚ್ಚನೆಯ ಭಾವಕ್ಕೆ ಕಾಯುವವರೇ. ಹಾಗಾಗಿ ಅಪ್ಪಿಕೊಳ್ಳಲು ಇದು ಪರ್ಫೆಕ್ಟ್ ದಿನವಂತೆ.
ಫೆಬ್ರವರಿ 13- ಕಿಸ್ ಡೇ
ಅಪ್ಪಿಕೊಂಡಾಗಲೇ ಎರಡು ಹೃದಯಗಳು ಸೇರಿದ್ದಾಗಿದೆ. ಇನ್ನು ಅದರ ಮತ್ತೊಂದು ಮಜಲು. ಅದು ಮುತ್ತು. ಮುತ್ತಿನ ಮತ್ತಿಗೆ ಕರಗದವರ್ಯಾರು ಹೇಳಿ. ಅದಕ್ಕಾಗಿಯೇ ಇದೆ ಈ ಮುತ್ತಿನ ದಿನ. ಎರಡು ದೇಹ ಒಂದೇ ಜೀವ ಎಂದು ಹತ್ತಿರವಾದದ್ದರ ಸಂಕೇತ ಈ ಮುತ್ತು. ಹಾಗಾಗಿ ಇದು ಮುತ್ತಿನ ಮತ್ತಿನ ಗಮ್ಮತ್ತಿನ ದಿನ!
ಫೆಬ್ರವರಿ 14- ಪ್ರೇಮಿಗಳ ದಿನ
ಇದು ಬಹುಮುಖ್ಯ ಘಟ್ಟ. ಈ ಎಲ್ಲ ತಯಾರಿಗಳನ್ನೂ ಹಾದ ಮೇಲೆ ಬರುವ ಫೆಬ್ರವರಿ 14ನೇ ತಾರೀಕು ಪ್ರೇಮಿಗಳ ದಿನ. ಪ್ರೇಮಿಗಳ ಪಾಲಿಗೆ ಪ್ರತಿದಿನವೂ ಹಬ್ಬವಾದರೂ, ಈ ಒಂದು ಅದನ್ನು ಆಚರಿಸಲಿಕ್ಕಾಗಿಯೇ ಇರುವ ದಿನ. ಪ್ರೀತಿಯಲ್ಲಿ ಇದ್ದೇ ಇರುವ ಕೋಪ, ಮುನಿಸುಗಳನ್ನೆಲ್ಲ ಮರೆತು ಖುಷಿಯಾಗಿ ಜೊತೆಯಾಗಿ ಕಾಲ ಕಳೆಯಲು ಇರುವ ದಿನ.
ಇದನ್ನೂ ಓದಿ: Valentine Day: ಪ್ರೀತಿಸುವ ಜೋಡಿಗಳಿಗೆ ಸೂಕ್ತ ರೊಮ್ಯಾಂಟಿಕ್ ಪ್ರವಾಸೀ ತಾಣಗಳಿವು!