ನವದೆಹಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ಇತ್ತೀಚೆಗೆ ಫಲಿತಾಂಶ ಪ್ರಕಟಗೊಂಡಿರು ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (NEET UG) ಫಲಿತಾಂಶಗಳಲ್ಲಿ ವ್ಯಾಪಕ ವ್ಯತ್ಯಾಸಗಳಿವೆ ಎಂದು ಆರೋಪಿಸಿ, ನೀಟ್-ಯುಜಿ 2024 ಫಲಿತಾಂಶಗಳನ್ನು ಹಿಂಪಡೆಯಲು ಮತ್ತು ಹೊಸದಾಗಿ ಪರೀಕ್ಷೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಗ್ರೇಸ್ ಅಂಕಗಳನ್ನು ನೀಡುವಲ್ಲಿ ಏಕಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ, ಹಲವಾರು ವಿದ್ಯಾರ್ಥಿಗಳು ಗಳಿಸಿದ 720, 719 ಮತ್ತು 718 ಅಂಕಗಳು ಲೆಕ್ಕಾಚಾರ ಪ್ರಕಾರ ಅಸಾಧ್ಯ ಎಂದು ಅವರು ವಾದಿಸಿದ್ದಾರೆ.
ಪರೀಕ್ಷೆಯ ವಿಳಂಬದಿಂದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಗ್ರೇಸ್ ಅಂಕಗಳನ್ನು ನೀಡಿದೆ. ಇದು ಕೆಲವು ವಿದ್ಯಾರ್ಥಿಗಳಿಗೆ ಹಿಂಬಾಗಿಲ ಪ್ರವೇಶ ಕಲ್ಪಿಸುವಂಥ ದುರುದ್ದೇಶಪೂರಿತ ಅಭ್ಯಾಸ ಎಂದು ಆರೋಪಿಸಲಾಗಿದೆ.
ಒಂದು ನಿರ್ದಿಷ್ಟ ವಿದ್ಯಾಸಂಸ್ಥೆಯ 67 ವಿದ್ಯಾರ್ಥಿಗಳು ಪೂರ್ಣ 720 ಅಂಕಗಳನ್ನು ಪಡೆದಿದ್ದಾರೆ ಎಂಬ ಅಂಶದ ಬಗ್ಗೆ ಅರ್ಜಿದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 29 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದ ತಾತ್ಕಾಲಿಕ ಕೀ ಉತ್ತರಗಳ ಬಗ್ಗೆಯೂ ಹಲವಾರು ದೂರುಗಳಿವೆ ಎಂದು ಗಮನಸೆಳೆಯಲಾಗಿದೆ.
ಹಲವಾರು ದೂರುಗಳು ದಾಖಲು
ಮೇ 5 ರಂದು ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ವ್ಯಾಪಕ ದೂರುಗಳನ್ನು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಕ್ರಮದ ಆಧಾರದ ಮೇಲೆ ಇಡೀ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ 2 ಅರ್ಜಿಗಳನ್ನು ಸಲ್ಲಿಸಲಾಗಿದೆ. ಮೇ 17 ರಂದು ಸುಪ್ರೀಂ ಕೋರ್ಟ್ ಅಂತಹ ಒಂದು ಅರ್ಜಿಯ ಬಗ್ಗೆ ನೋಟಿಸ್ ನೀಡಿತ್ತು. ಆದರೆ ಫಲಿತಾಂಶಗಳ ಘೋಷಣೆಗೆ ತಡೆ ನೀಡಲು ಸಮ್ಮತಿಸಿರಲಿಲ್ಲ.
ಇದನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ !
ತೆಲಂಗಾಣ ಮತ್ತು ಆಂಧ್ರಪ್ರದೇಶ ಮೂಲದ ಅಬ್ದುಲ್ಲಾ ಮೊಹಮ್ಮದ್ ಫೈಜ್ ಮತ್ತು ಡಾ.ಶೇಖ್ ರೋಷನ್ ಮೊಹಿದ್ದೀನ್ ಅವರು ಪ್ರಸ್ತುತ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆ ಪೂರ್ಣಗೊಳ್ಳುವವರೆಗೆ ನೀಟ್-ಯುಜಿ 2024 ಪ್ರವೇಶಕ್ಕಾಗಿ ನಡೆಸಬೇಕಾದ ಕೌನ್ಸೆಲಿಂಗ್ಗೆ ತಡೆ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಇದಲ್ಲದೆ, ಪರೀಕ್ಷೆಯ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುವಂತೆಯೂ ಕೋರಲಾಗಿದೆ.
ಈ ವರ್ಷದ ನೀಟ್ (ಪದವಿಪೂರ್ವ) ಪರೀಕ್ಷೆಗೆ ಹಾಜರಾಗುವಾಗ ತಡವಾಗಿದ್ದ ಸಮಯದ ನಷ್ಟವನ್ನು ಸರಿದೂಗಿಸಲು “ಗ್ರೇಸ್ ಅಂಕಗಳನ್ನು” ಪಡೆದ 1,500 ಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯ ಶನಿವಾರ ಪ್ರಕಟಿಸಿದೆ.