ನವದೆಹಲಿ: ಮದುವೆ ಘೋಷಣೆ ಕುರಿತಂತೆ ಸುಪ್ರೀಂ ಕೋರ್ಟ್ (Supreme Court) ಮಹತ್ವದ ಆದೇಶ ಹೊರಡಿಸಿದೆ. ಮಾನ್ಯವಾಗಿರುವ ಮದುವೆಯ ಕುರಿತು ಯಾವುದೇ ದಂಪತಿಯು ಬಹಿರಂಗವಾಗಿ ಘೋಷಣೆ (Marriage Declaration) ಮಾಡಬೇಕಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಹಾಗೂ ಅರವಿಂದ್ ಕುಮಾರ್ ನೇತೃತ್ವದ ನ್ಯಾಯಪೀಠವು ತಿಳಿಸಿದೆ.
“ಕುಟುಂಬಗಳಲ್ಲಿ ತೊಂದರೆ ಇರುವಾಗ, ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾಗ ಹಾಗೂ ಅವರ ಸುರಕ್ಷತೆಗೆ ಧಕ್ಕೆ ಬರುತ್ತದೆ ಎಂಬಂತಹ ಪ್ರಕರಣಗಳಲ್ಲಿ ದಂಪತಿಯು ಮದುವೆಯ ಕುರಿತು ಬಹಿರಂಗವಾಗಿ ಘೋಷಣೆ ಮಾಡಬೇಕಿಲ್ಲ. ಹಾಗೊಂದು ವೇಳೆ, ಘೋಷಣೆ ಕಡ್ಡಾಯ ಎಂತಾದರೆ ಅವರ ಜೀವಕ್ಕೆ ಕುತ್ತು ಬರುತ್ತದೆ. ಇಲ್ಲವೇ, ಅವರು ಬಲವಂತವಾಗಿ ಬೇರಾಗಬೇಕಾಗುತ್ತದೆ” ಎಂದು ಕೋರ್ಟ್ ತಿಳಿಸಿದೆ.
ಏನಿದು ಪ್ರಕರಣ?
ಹಿಂದು ಮದುವೆ ಕಾಯ್ದೆಯ ಸೆಕ್ಷನ್ 7-ಎ (ತಮಿಳುನಾಡು ರಾಜ್ಯ ತಿದ್ದುಪಡಿ) ಪ್ರಕಾರ ಸ್ವಯಂ-ಮದುವೆ (ಮದುವೆಯಾದ ನೂತನ ದಂಪತಿಯ ಸ್ವಯಂ ಘೋಷಣೆ) ಮಾಡಿಕೊಳ್ಳಬಹುದಾಗಿದೆ. ಅದರಂತೆ, ತಮಿಳುನಾಡಿನಲ್ಲಿ ವಕೀಲರ ಕಚೇರಿಯಲ್ಲಿ, ವಕೀಲರ ಸಮ್ಮುಖದಲ್ಲಿ ಇಬ್ಬರ ಮದುವೆ ಆಗಿತ್ತು. ಆದರೆ, ಇದು ಬಲವಂತದ ಮದುವೆ ಹಾಗೂ ಸಾರ್ವಜನಿಕವಾಗಿ ಘೋಷಣೆ ಆಗಿಲ್ಲ ಎಂದು ಮಹಿಳೆಯ ಮೊದಲ ಪತಿಯು ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: Viral News : ಮದುವೆಯಾದ ದಿನದಂದೇ ಮುರಿದುಬಿತ್ತು ದಾಂಪತ್ಯ! ಅದಕ್ಕೆಲ್ಲ ಕಾರಣವಾಗಿದ್ದು ಆ ಒಂದು ಕೇಕ್!
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ವಕೀಲರ ಕಚೇರಿಯಲ್ಲಿ ನಡೆದ ಮದುವೆ ಅಮಾನ್ಯ ಎಂದು ಆದೇಶಿಸಿತ್ತು. ಮದುವೆಯಾಗುವ ಮುನ್ನ ದಂಪತಿಯು ನೋಂದಣಿ ಕಚೇರಿಯಲ್ಲಿ ಹಾಜರಿರಬೇಕಾಗಿದ್ದು ನಿಯಮವಾಗಿದೆ. ಇದಾವುದೇ ಪ್ರಕ್ರಿಯೆ ಅನುಸರಿಸದ ಕಾರಣ ಮದುವೆ ಅಮಾನ್ಯ ಎಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಅಲ್ಲದೆ, ವ್ಯಕ್ತಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್‌ಅನ್ನು ಕೂಡ ಬದಿಗೆ ಸರಿಸಿದೆ.