Site icon Vistara News

Vande Bharat: ವಂದೇ ಭಾರತ್‌ ರೈಲಲ್ಲಿ ಕಳಪೆ ಆಹಾರ; ದುಡ್ಡು ವಾಪಸ್‌ ಕೊಡಿ ಎಂದ ಪ್ರಯಾಣಿಕ

Vande Bharat Food

Vande Bharat Passengers Demand Refund For Being Served Spoilt & Stale Food

ನವದೆಹಲಿ: ಸುಸಜ್ಜಿತ ವ್ಯವಸ್ಥೆ, ಐಷಾರಾಮಿ ಸೌಕರ್ಯಗಳು ಹಾಗೂ ವೇಗದ ಕಾರಣಕ್ಕಾಗಿ ದೇಶಾದ್ಯಂತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು (Vande Bharat Express Train) ಸುದ್ದಿಯಾಗುತ್ತಿವೆ. ಜನರಿಂದಲೂ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಇತ್ತೀಚೆಗೆ ವಂದೇ ಭಾರತ್‌ ರೈಲುಗಳಲ್ಲಿ ಸ್ವಚ್ಛತೆ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ, ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕಳಪೆ ಆಹಾರ (Stale Food) ನೀಡಿದ ಆರೋಪ ಕೇಳಿಬಂದಿದೆ. ಪ್ರಯಾಣಿಕರೊಬ್ಬರು ಈ ಕುರಿತು ವಿಡಿಯೊ (Viral Video) ಹಂಚಿಕೊಂಡಿದ್ದು, ನನ್ನ ದುಡ್ಡು ವಾಪಸ್‌ ಕೊಡಿ ಎಂದು ಆಗ್ರಹಿಸಿದ್ದಾರೆ.

ದೆಹಲಿಯಿಂದ ವಾರಾಣಸಿಗೆ ಹೊರಟಿದ್ದ ಅಕಾಶ್‌ ಕೆಶಾರಿ ಎಂಬ ಪ್ರಯಾಣಿಕರು ತಮಗೆ ಕಳಪೆ ಹಾಗೂ ಹಳಸಿದ ಆಹಾರ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು ಎರಡು ವಿಡಿಯೊಗಳನ್ನೂ ಹಂಚಿಕೊಂಡಿದ್ದಾರೆ. “ನಾನು ದೆಹಲಿಯಿಂದ ವಾರಾಣಸಿ ರೈಲಿನಲ್ಲಿ ಪ್ರಯಾಣಿಸಿದೆ. ರೈಲಿನಲ್ಲಿ ನನಗೆ ಭಾರಿ ಕಳಪೆ ಹಾಗೂ ಹಳಸಿದ ಆಹಾರವನ್ನು ನೀಡಿದ್ದಾರೆ. ದಯಮಾಡಿ ನನ್ನ ಹಣ ರಿಫಂಡ್‌ ಮಾಡಿ. ಈ ವ್ಯಾಪಾರಿಗಳು (Vendors) ವಂದೇ ಭಾರತ್‌ ರೈಲಿನ ಬ್ರ್ಯಾಂಡ್‌ಗೆ ಮಸಿ ಬಳಿಯುತ್ತಿದ್ದಾರೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Vande Bharat Express : ಬೆಳಗಾವಿಗೂ ವಂದೇ ಭಾರತ್‌ ವಿಸ್ತರಿಸಿ; ರೈಲ್ವೆ ಸಚಿವರಿಗೆ ಸಿಎಂ ಪತ್ರ

ಇತ್ತೀಚೆಗೆ ವಂದೇ ಭಾರತ್‌ ರೈಲಿನಲ್ಲಿ ಸ್ವಚ್ಛತೆ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು. ರೈಲು ಬೋಗಿ ತುಂಬ ಕಸವೇ ಕಾಣಿಸುತ್ತಿದ್ದ ವಿಡಿಯೊಗಳು ವೈರಲ್‌ ಆಗಿದ್ದವು. ಇನ್ನು, ರೈಲಿನಲ್ಲಿ ಹಲಾಲ್‌ ಟೀ ನೀಡಲಾಗಿದೆ ಎಂದು ಮತ್ತೊಬ್ಬ ಪ್ರಯಾಣಿಕರು ಆರೋಪ ಮಾಡಿದ್ದರು. ಇದಕ್ಕೆ ರೈಲ್ವೆ ಇಲಾಖೆಯು ಪ್ರತಿಕ್ರಿಯೆ ನೀಡಿ, ಹಲಾಲ್‌ ಟೀ ಅಲ್ಲ ಎಂದು ತಿಳಿಸಿತ್ತು. ಇನ್ನು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಕಲ್ಲು ಎಸೆಯುವ, ಗಾಜು ಒಡೆಯುವ ಪ್ರಕರಣಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ.

ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಟಿಕೆಟ್‌ ಅನ್ನೂ ಪಡೆಯದೆ ವಂದೇ ಭಾರತ್‌ ರೈಲನ್ನು ಹತ್ತಿ, ಅದರ ಶೌಚಾಲಯದೊಳಗೆ ಕೂತು ಬೀಡಿ ಸೇದಿದ್ದ. ಇದರಿಂದಾಗಿ ರೈಲಿನ ಫೈರ್‌ ಅಲಾರಾಂ ಹೊಡೆದುಕೊಂಡಿದ್ದು, ರೈಲನ್ನು ನಿಲ್ಲಿಸುವ ಸ್ಥಿತಿ ಬಂದೊದಗಿತ್ತು. ವಂದೇ ಭಾರತ್‌ ರೈಲು ತಿರುಪತಿಯಿಂದ ಸಿಕಂದರಾಬಾದ್‌ಗೆ ಪ್ರಯಾಣ ಮಾಡುತ್ತಿತ್ತು. ಪ್ರಯಾಣಿಕರೆಲ್ಲರೂ ರೈಲಿನಲ್ಲಿ ಕುಳಿತುಕೊಂಡು ತಮ್ಮ ತಮ್ಮ ಆಲೋಚನೆಗಳಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ವ್ಯಕ್ತಿಯೊಬ್ಬ ರೈಲಿನ ಟಿಕೆಟ್‌ ಅನ್ನೂ ಪಡೆಯದೆ ವಂದೇ ಭಾರತ್‌ ರೈಲನ್ನು ಹತ್ತಿದ್ದ. ಅಷ್ಟಕ್ಕೆ ಸುಮ್ಮನಾಗದ ಆತ, ರೈಲಿನ ಶೌಚಾಲಯದೊಳಗೆ ತೆರಳಿ ಅಲ್ಲಿ ಬೀಡಿಯನ್ನು ಹಚ್ಚಿಕೊಂಡು ಸೇದಲಾರಂಭಿಸಿದ್ದಾನೆ. ಇದರಿಂದಾಗಿ ರೈಲು ನಿಲ್ಲಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version