Site icon Vistara News

Vande Bharat: ವಂದೇ ಭಾರತ್‌ ರೈಲಿನ ಊಟದಲ್ಲಿ ಸತ್ತ ಜಿರಳೆ ಪತ್ತೆ; ಪ್ರಯಾಣಿಕ ಕಂಗಾಲು

Vande Bharat Train Food

Vande Bharat Train passenger finds dead cockroach in meal; IRCTC reacts

ಭೋಪಾಲ್‌: ಆರಾಮದಾಯಕ ಪ್ರಯಾಣ, ಸಮಯದ ಉಳಿತಾಯ, ಐಷಾರಾಮಿ ಸೌಕರ್ಯಗಳಿರುವ ಕಾರಣಕ್ಕಾಗಿ ದುಡ್ಡು ಹೆಚ್ಚಾದರೂ ಪರವಾಗಿಲ್ಲ ಎಂದು ಹೆಚ್ಚಿನ ಜನ ವಂದೇ ಭಾರತ್‌ ರೈಲಿನಲ್ಲಿ (Vande Bharat Train) ಪ್ರಯಾಣಿಸುತ್ತಾರೆ. ಆದರೆ, ಇತ್ತೀಚೆಗೆ ವಂದೇ ಭಾರತ್‌ ರೈಲಿನಲ್ಲಿ ಸ್ವಚ್ಛತೆ, ಕಳಪೆ ಆಹಾರದ ಕುರಿತು ಪ್ರಯಾಣಿಕರು ದೂರುತ್ತಿರುವುದು ಹೆಚ್ಚಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ವಂದೇ ಭಾರತ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಊಟದಲ್ಲಿ ಸತ್ತ ಜಿರಳೆ (Cockroach) ಪತ್ತೆಯಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಡಾ.ಸುಭೇಂದು ಕೆಶಾರಿ ಅವರು ಭೋಪಾಲ್‌ನ ರಾಣಿ ಕಮ್ಲಾಪತಿ ರೈಲು ನಿಲ್ದಾಣದಿಂದ ಜಬಲ್ಪುರ ಜಂಕ್ಷನ್‌ಗೆ ರೇವಾ ವಂದೇ ಭಾರತ್‌ ರೈಲಿನಲ್ಲಿ ತೆರಳುತ್ತಿದ್ದಾಗ ಅವರು ಆರ್ಡರ್‌ ಮಾಡಿದ ಊಟದಲ್ಲಿ ಸತ್ತ ಜಿರಳೆ ಸಿಕ್ಕಿದೆ. ಈ ಕುರಿತು ಜಬಲ್ಪುರ ರೈಲು ನಿಲ್ದಾಣದಲ್ಲಿ ಅವರು ದೂರು ನೀಡಿದ್ದಾರೆ. ಹಾಗೆಯೇ, ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ. “ನಾನು ಆರ್ಡರ್‌ ಮಾಡಿದ ಊಟದಲ್ಲಿ ಸತ್ತ ಜಿರಳೆಯನ್ನು ನೋಡಿ ಆಘಾತವಾಯಿತು” ಎಂದು ಬರೆದುಕೊಂಡಿದ್ದಾರೆ.

ಇವರ ಪೋಸ್ಟ್‌ಗೆ ಐಆರ್‌ಸಿಟಿಸಿ ಪ್ರತಿಕ್ರಿಯೆ ನೀಡಿದೆ. “ನೀವು ಅನುಭವಿಸಿದ ತೊಂದರೆಗೆ ಕ್ಷಮೆಯಾಚಿಸುತ್ತೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸರ್ವಿಸ್‌ ಪ್ರೊವೈಡರ್‌ಗೆ ಭಾರಿ ದಂಡ ವಿಧಿಸಿದ್ದೇವೆ. ಹಾಗೆಯೇ, ಹೆಚ್ಚಿನ ನಿಗಾ ಇರಿಸಲು ಕೂಡ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದೆ. ಡಾ.ಸುಭೇಂದು ಕೆಶಾರಿ ಅವರ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳಸಿದ ಅನ್ನ ಎಂದು ಪ್ರಯಾಣಿಕ ಆಕ್ರೋಶ

ಕೆಲ ತಿಂಗಳ ಹಿಂದೆಯೂ ವಂದೇ ಭಾರತ್‌ ರೈಲಿನಲ್ಲಿ ಪ್ರಯಾಣಿಕರೊಬ್ಬರು ಆರ್ಡರ್‌ ಮಾಡಿದ ಊಟ ಹಳಸಿತ್ತು. ಆ ಕುರಿತು ಅವರು ಪೋಸ್ಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ದೆಹಲಿಯಿಂದ ವಾರಾಣಸಿಗೆ ಹೊರಟಿದ್ದ ಆಕಾಶ್‌ ಕೆಶಾರಿ ಎಂಬ ಪ್ರಯಾಣಿಕರು ತಮಗೆ ಕಳಪೆ ಹಾಗೂ ಹಳಸಿದ ಆಹಾರ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಕುರಿತು ಅವರು ಎರಡು ವಿಡಿಯೊಗಳನ್ನೂ ಹಂಚಿಕೊಂಡಿದ್ದರು. “ನಾನು ದೆಹಲಿಯಿಂದ ವಾರಾಣಸಿ ರೈಲಿನಲ್ಲಿ ಪ್ರಯಾಣಿಸಿದೆ. ರೈಲಿನಲ್ಲಿ ನನಗೆ ಭಾರಿ ಕಳಪೆ ಹಾಗೂ ಹಳಸಿದ ಆಹಾರವನ್ನು ನೀಡಿದ್ದಾರೆ. ದಯಮಾಡಿ ನನ್ನ ಹಣ ರಿಫಂಡ್‌ ಮಾಡಿ. ಈ ವ್ಯಾಪಾರಿಗಳು (Vendors) ವಂದೇ ಭಾರತ್‌ ರೈಲಿನ ಬ್ರ್ಯಾಂಡ್‌ಗೆ ಮಸಿ ಬಳಿಯುತ್ತಿದ್ದಾರೆ” ಎಂದು ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: Viral Video: ವಂದೇ ಭಾರತ್‌ ರೈಲಿನಲ್ಲಿ ಫೈಟಿಂಗ್‌ ಸೀನ್‌; ಮೆಟ್ರೋ ಚಾಳಿ ಇಲ್ಲಿಗೂ ಕಾಲಿಟ್ಟಿದೆ ಎಂದ್ರು ನೆಟ್ಟಿಗರು

ಇತ್ತೀಚೆಗೆ ವಂದೇ ಭಾರತ್‌ ರೈಲಿನಲ್ಲಿ ಸ್ವಚ್ಛತೆ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು. ರೈಲು ಬೋಗಿ ತುಂಬ ಕಸವೇ ಕಾಣಿಸುತ್ತಿದ್ದ ವಿಡಿಯೊಗಳು ವೈರಲ್‌ ಆಗಿದ್ದವು. ಇನ್ನು, ರೈಲಿನಲ್ಲಿ ಹಲಾಲ್‌ ಟೀ ನೀಡಲಾಗಿದೆ ಎಂದು ಮತ್ತೊಬ್ಬ ಪ್ರಯಾಣಿಕರು ಆರೋಪ ಮಾಡಿದ್ದರು. ಇದಕ್ಕೆ ರೈಲ್ವೆ ಇಲಾಖೆಯು ಪ್ರತಿಕ್ರಿಯೆ ನೀಡಿ, ಹಲಾಲ್‌ ಟೀ ಅಲ್ಲ ಎಂದು ತಿಳಿಸಿತ್ತು. ಇನ್ನು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಕಲ್ಲು ಎಸೆಯುವ, ಗಾಜು ಒಡೆಯುವ ಪ್ರಕರಣಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version