ಹೊಸದಿಲ್ಲಿ: ಬಹು ನಿರೀಕ್ಷಿತ ವಂದೇ ಭಾರತ್ (Vande Bharat train) ಸ್ಲೀಪರ್ ಕೋಚ್‌ಗಳ (Vande Bharat sleeper coach) ಕೆಲವು ಮಾದರಿ ಚಿತ್ರಗಳನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಮಂಗಳವಾರ ಎಕ್ಸ್(ಟ್ವಿಟರ್)ನಲ್ಲಿ ಪ್ರಕಟಿಸಿದ್ದಾರೆ.
ಸ್ವದೇಶಿ ನಿರ್ಮಿತ ಸೆಮಿ-ಹೈ ಸ್ಪೀಡ್ ರೈಲಿನ ಕೋಚ್‌ಗಳ ಈ ಚಿತ್ರಗಳನ್ನು ಹಾಕಿರುವ ಅಶ್ವಿನಿ ವೈಷ್ಣವ್ ಅವರು, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ಆವೃತ್ತಿಗಳನ್ನು 2024ರ ಆರಂಭದಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಜಂಟಿಯಾಗಿ ಇವುಗಳನ್ನು ತಯಾರಿಸುತ್ತಿವೆ.
ಸ್ಲೀಪರ್ ಕೋಚ್‌ಗಳು 2024ರ ಫೆಬ್ರವರಿಯಲ್ಲಿ ಬರಬಹುದು ಎಂದು ಹೇಳಲಾಗಿದೆ. ಅಶ್ವಿನಿ ವೈಷ್ಣವ್ ಅವರು ಬಹಿರಂಗಪಡಿಸಿದ ಇತ್ತೀಚಿನ ಚಿತ್ರಗಳಲ್ಲಿ ಅತ್ಯಾಧುನಿಕ ಒಳಾಂಗಣ ಮತ್ತು ಸೌಕರ್ಯಗಳು ಕಾಣಿಸಿವೆ. ಇದು ಪ್ರಯಾಣಿಕರಿಗೆ ಐಷಾರಾಮಿ ರೈಲು ಪ್ರಯಾಣದ ಅನುಭವವನ್ನು ನೀಡಲಿವೆ ಎನ್ನಲಾಗಿದೆ. ಸ್ಲೀಪರ್ ಕೋಚ್‌ಗಳು ಹೆಚ್ಚು ಆರಾಮದಾಯಕವಾದ ಆಸನಗಳೊಂದಿಗೆ ಕ್ಲಾಸಿಕ್ ಮರದ ವಿನ್ಯಾಸವನ್ನು ಹೊಂದಿವೆ.
ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019ರ ಫೆಬ್ರವರಿಯಲ್ಲಿ ಉದ್ಘಾಟಿಸಿದರು. ಈ ರೈಲು ತನ್ನ ಮೊದಲ ಪ್ರಯಾಣವನ್ನು ನವದೆಹಲಿ ಮತ್ತು ವಾರಣಾಸಿ ನಡುವೆ ಆರಂಭಿಸಿತು. ಈಗಿರುವ ವಂದೇ ಭಾರತ್ ರೈಲುಗಳ ಜೊತೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ಆವೃತ್ತಿಯನ್ನು ಸೇರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
Concept train – Vande Bharat (sleeper version)
— Ashwini Vaishnaw (@AshwiniVaishnaw) October 3, 2023
Coming soon… early 2024 pic.twitter.com/OPuGzB4pAk
ಕಳೆದ ತಿಂಗಳು ಪಿಎಂ ಮೋದಿಯವರು ಒಂಬತ್ತು ವಂದೇ ಭಾರತ್ ರೈಲುಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು ಹೊಸ ಫೀಚರ್‌ಗಳನ್ನು ಇವುಗಳಲ್ಲಿ ಸೇರಿಸಲಾಗಿದೆ. ಆಸನದ ಒರಗುವ ಕೋನವನ್ನು ಸುಧಾರಿಸುವುದರಿಂದ ಹಿಡಿದು, ನೀರು ಚಿಮ್ಮುವುದನ್ನು ತಪ್ಪಿಸಲು ಆಳವಾದ ವಾಶ್ ಬೇಸಿನ್‌ಗಳನ್ನು ಅಳವಡಿಸುವವರೆಗೆ, ಕೋಚ್ ತಯಾರಕರು ಹಲವು ಸುಧಾರಣೆಗಳನ್ನು ಮಾಡಿದ್ದಾರೆ.