Site icon Vistara News

Vande Bharth Express : ಇನ್ನು ಮುಂದೆ ಕೇಸರಿ ಬಣ್ಣದಲ್ಲಿ ಕಂಗೊಳಿಸಲಿದೆ ವಂದೇ ಭಾರತ್​ ರೈಲು

Vande Bharath

ನವದೆಹಲಿ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ತಮಿಳುನಾಡಿನ ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಮ್ಮ ಭೇಟಿಯ ಸಮಯದಲ್ಲಿ, ಐಸಿಎಫ್ ಅಧಿಕಾರಿಗಳೊಂದಿಗೆ ಅವರು ಈ ಇತ್ತೀಚಿನ ಹೈಸ್ಪೀಡ್ ರೈಲುಗಳ ಉತ್ಪಾದನೆಯನ್ನು ಮೌಲ್ಯಮಾಪನ ಮಾಡಿದರು. ಜತೆಗೆ ಬೃಹತ್​​ ಕ್ಯಾಂಪಸ್ ಅನ್ನು ಪರಿಶೀಲನೆ ನಡೆಸಿದರು. ಇದೇ ವೇಳೆ ಅವರು ಇನ್ನು ಮುಂದೆ ವಂದೇ ಭಾರತ್​ ರೈಲುಗಳು ಕೇಸರಿ ಬಣ್ಣದಿಂದ ಕೂಡಿರಲಿವೆ ಎಂದು ಹೇಳಿದರು.

ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡ ವೀಡಿಯೊದಲ್ಲಿ ರೈಲ್ವೆ ಸಚಿವರು ವಂದೇ ಭಾರತ್ ರೈಲಿನೊಳಗಿನ ಆಸನಗಳನ್ನು ಪರಿಶೀಲಿಸುತ್ತಿರುವ ದೃಶ್ಯಗಳಿವೆ. . ಅವರು ಲೋಕೋ ಪೈಲಟ್ ವಲಯಕ್ಕೆ ಭೇಟಿ ನೀಡಿ ಪ್ರದೇಶವನ್ನು ಪರಿಶೀಲಿಸಿದರು. ವಿಶಿಷ್ಟ ಬೂದು-ಕೇಸರಿ ಬಣ್ಣದಲ್ಲಿ ಹೊಸ ವಂದೇ ಭಾರತ್ ರೈಲು ವೀಡಿಯೊದಲ್ಲಿದೆ. ಈ ಬಳಿಕ ಮಾತನಾಡಿದ ಅವರು ಹೊಸ ರೈಲುಗಳು ತ್ರಿವರ್ಣ ಧ್ವಜದಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಿದರು.

ಇದು ಮೇಕ್ ಇನ್ ಇಂಡಿಯಾದ ಪರಿಕಲ್ಪನೆಯಾಗಿದ್ದು, ನಮ್ಮ ಎಂಜಿನಿಯರ್​ಗಳು ಮತ್ತು ತಂತ್ರಜ್ಞರು ಭಾರತದಲ್ಲಿಯೇ ವಿನ್ಯಾಸಗೊಳಿಸಿದ್ದಾರೆ. ಆದ್ದರಿಂದ ವಂದೇ ಭಾರತ್ ಕಾರ್ಯಾಚರಣೆಯ ಸಮಯದಲ್ಲಿ ಹವಾನಿಯಂತ್ರಿತ ವ್ಯವಸ್ಥೇ, ಶೌಚಾಲಯಗಳು ಸೇರಿದಂತೆ ಎಲ್ಲ ವಿಚಾರದ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗುತ್ತಿದ್ದು. ಆ ಎಲ್ಲಾ ಸುಧಾರಣೆಗಳನ್ನು ಹೊಸ ರೈಲಿನಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದರು.

ಹೊಸ ರೈಲಿನಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನೂ ಹೆಚ್ಚಿಸುತ್ತಿದ್ದೇವೆ. ಆ್ಯಂಟಿ ಕ್ಲೈಂಬರ್​ ಅಥವಾ ಆಂಟಿ-ಕ್ಲೈಂಬಿಂಗ್ ಸಾಧನಗಳನ್ನು ಪರಿಶೀಲಿಸಿದ್ದೇವೆ. ವಂದೇ ಭಾರತ್ ಮತ್ತು ಇತರ ರೈಲುಗಳಲ್ಲಿ ಈ ಫೀಚರ್​​ಗಳನ್ನು ಹೊಂದಲಿವೆ ಎಂದು ಹೇಳಿದರು.

ಪಾರಂಪರಿಕ ರೈಲುಗಳ ಅನಾವರಣ

ಇದಕ್ಕೂ ಮುನ್ನ ವೈಷ್ಣವ್ ಅವರು ದೇಶಾದ್ಯಂತ ಪಾರಂಪರಿಕ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ವಿಶೇಷ ರೈಲನ್ನು ಅನಾವರಣಗೊಳಿಸಿದರು. ಎಂಜಿಆರ್ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಮಾರ್ಪಡಿಸಲಾದ ಉಗಿ ಬಂಡಿಯನ್ನು ಅವರು ಪರಿಶೀಲಿಸಿದರು, ಮುಂಬರುವ ತಿಂಗಳುಗಳಲ್ಲಿ ಈ ಹೆಚ್ಚಿನ ರೈಲುಗಳನ್ನು ದೇಶಾದ್ಯಂತ ಪಾರಂಪರಿಕ ಮಾರ್ಗಗಳಲ್ಲಿ ಪರಿಚಯಿಸಲಾಗುವುದು ಎಂದು ಹೇಳಿದರು.

ಇದಲ್ಲದೆ, ವೈಷ್ಣವ್ ಅವರು ಚೆನ್ನೈನಲ್ಲಿರುವ ದಕ್ಷಿಣ ರೈಲ್ವೆಯ ಪ್ರಧಾನ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಸುರಕ್ಷತಾ ಕ್ರಮಗಳು, ಮೂಲಸೌಕರ್ಯ ಮತ್ತು ನಿಲ್ದಾಣದ ಪುನರಾಭಿವೃದ್ಧಿ ಯೋಜನೆಗಳ ಪ್ರಗತಿ, ವೇಗ ವರ್ಧನೆ ಮತ್ತು ರೈಲು ವೇಳಾಪಟ್ಟಿಗಳಂತಹ ವಿವಿಧ ವಿಷಯಗಳನ್ನು ಚರ್ಚಿಸಿದರು.

2018-19ರಲ್ಲಿ ಮೊದಲ ವಂದೇ ಭಾರತ್ ಪರಿಚಯಿಸಿದ ಐಸಿಎಫ್

ಐಸಿಎಫ್ 2018-19ರಲ್ಲಿ ಸಾಮಾನ್ಯವಾಗಿ “ವಂದೇ ಭಾರತ್ ಎಕ್ಸ್​​ಪ್ರೆಸ್​” ಎಂದು ಕರೆಯಲ್ಪಡುವ ಭಾರತದ ಮೊದಲ ಸೆಮಿ-ಹೈಸ್ಪೀಡ್ ರೈಲನ್ನು ಪರಿಚಯಿಸಿತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಇದು ನವದೆಹಲಿಯಿಂದ ವಾರಣಾಸಿಗೆ ಪ್ರಯಾಣ ಮಾಡಿತ್ತು. ಅಕ್ಟೋಬರ್ 2022ರ ಎರಡನೇ ವಾರದಲ್ಲಿ, ಐಸಿಎಫ್ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿತು. ಕಾರ್ಖಾನೆಯು 70,000 ಕ್ಕೂ ಹೆಚ್ಚು ಬೋಗಿಗಳನ್ನು ಉತ್ಪಾದಿಸಿದ್ದು, ಇದು ವಿಶ್ವದಾದ್ಯಂತ ಪ್ರಯಾಣಿಕರ ಬೋಗಿಗಳ ಪ್ರಮುಖ ತಯಾರಕ ಘಟಕ ಎನಿಸಿಕೊಂಡಿದೆ.

ಇದನ್ನೂ ಓದಿ : Vande Bharat Express: ವಂದೇ ಭಾರತ್‌ ರೈಲು ದುಬಾರಿ ಎಂಬ ಬೇಸರ ಬೇಡ; ಸಿಗಲಿದೆ ಇಷ್ಟು ಡಿಸ್ಕೌಂಟ್

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗೋರಖ್​ಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದರು.. ಗೋರಖ್​​ಪುರ -ಲಕ್ನೋ ವಂದೇ ಭಾರತ್ ಎಕ್​​ಪ್ರೆಸ್​ ರೈಲು ಇದಾಗಿದೆ. ಇದು ನಾಲ್ಕು ಗಂಟೆಗಳಲ್ಲಿ 302 ಕಿ.ಮೀ ದೂರವನ್ನು ಕ್ರಮಿಸುತ್ತದೆ.

ಜೋಧಪುರ-ಸಾಬರಮತಿ ವಂದೇ ಭಾರತ್ ಎಕ್ಸ್​​ಪ್ರೆಸ್​ ರೈಲು ರಾಜಸ್ಥಾನದ ಜೋಧಪುರ ಮತ್ತು ಗುಜರಾತ್​​ನ ಅಹಮದಾಬಾದ್ ನಡುವೆ ಕಾರ್ಯನಿರ್ವಹಿಸಲಿದ್ದು, ಮಾರ್ಗದಲ್ಲಿ ಪಾಲಿ, ಅಬು ರೋಡ್, ಪಾಲನ್ಪುರ ಮತ್ತು ಮೆಹ್ಸಾನಾ ಸ್ಟೇಷನ್​ ಮೂಲಕ ಹಾದುಹೋಗಲಿದೆ.

Exit mobile version