Site icon Vistara News

Gyanvapi Mosque Case | ಜ್ಞಾನವಾಪಿ ಮಸೀದಿಯ ಶಿವಲಿಂಗಕ್ಕೆ ಪೂಜೆ, ಮತ್ತೆ ನ.17ಕ್ಕೆ ತೀರ್ಪು ಮುಂದೂಡಿಕೆ

Gnanavapi Masjid

ವಾರಾಣಸಿ: ಇಲ್ಲಿನ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque Case) ಇದೆ ಎನ್ನಲಾದ ಶಿವಲಿಂಗಕ್ಕೆ ಪೂಜೆಗೆ ಅವಕಾಶ ಕೋರಿ ಸಲ್ಲಿಸಲಾಗಿದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ವಾರಾಣಸಿ ನ್ಯಾಯಾಲಯವು ತನ್ನ ತೀರ್ಪನ್ನು ನವೆಂಬರ್ 17ಕ್ಕೆ ಮತ್ತೆ ಮುಂದೂಡಿದೆ. ವಾಸ್ತವದಲ್ಲಿ ಸೋಮವಾರ(ನ.14)ವೇ ಕೋರ್ಟ್ ತೀರ್ಪು ಪ್ರಕಟಿಸಬೇಕಾಗಿತ್ತು.

ಅಕ್ಟೋಬರ್ 27ರಂದು ನ್ಯಾಯಾಲಯವು ವಿಚಾರಣೆಯನ್ನು ಪೂರ್ತಿಗೊಳಿಸಿ, ನವೆಂಬರ್ 8ಕ್ಕೆ ತೀರ್ಪು ನೀಡುವುದಾಗಿ ಹೇಳಿತ್ತು. ಆದರೆ, ನವೆಂಬರ್ 8ರಂದು ಸಂಬಂಧಿಸಿದ ನ್ಯಾಯಾಧೀಶರು ಗೈರು ಹಾಜರಾದ್ದರಿಂದ ತೀರ್ಪು ಪ್ರಕಟ ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಸಿನಿಯರ್ ಡಿವಿಷನ್ ಸಿವಿಲ್ ಜಡ್ಜ್ ಮಹೇಂದ್ರ ಪಾಂಡೆ ಅವರು ನವೆಂಬರ್ 17ಕ್ಕೆ ತೀರ್ಪು ಮುಂದೂಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೂಡ ವಿಚಾರಣೆ ನಡೆಸಿ, ಶಿವಲಿಂಗ ರಕ್ಷಣೆಗೆ ಆದೇಶಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರನಿಗೆ ತಕ್ಷಣದಿಂದಲೇ ಪೂಜೆಗೆ ಅವಕಾಶ ನೀಡುವುದು, ಇಡೀ ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಹಸ್ತಾಂತರಿಸುವುದು ಮತ್ತು ಜ್ಞಾನವಾಪಿ ಸಂಕೀರ್ಣದೊಳಗೆ ಮುಸ್ಲಿಮರಿಗೆ ಪ್ರವೇಶವನ್ನು ನಿರಾಕರಿಸುವುದು… ಈ ಮೂರೂ ವಿಚಾರಗಳಿಗೆ ಸಂಬಂಧಿಸಿದಂತೆ ಹಿಂದೂಗಳು ಕೋರ್ಟ್ ಮೊರೆ ಹೋಗಿದ್ದರು.

ಈ ಹಿಂದಿನ ವಿಚಾರಣೆ ವೇಳೆ, ಮಸೀದಿಯೊಳಗೆ ಇದೆ ಎನ್ನಲಾದ ಶಿವಲಿಂಗದ ವೈಜ್ಞಾನಿಕ(ಕಾರ್ಬನ್ ಡೇಟಿಂಗ್) ಪರೀಕ್ಷೆಗೆ ನ್ಯಾಯಾಲಯವು ನಿರಾಕರಿಸಿತ್ತು. ಕಾರ್ಬನ್ ಡೇಟಿಂಗ್ ಪರೀಕ್ಷೆಯ ಮೂಲಕ ಶಿವಲಿಂಗ ಎಷ್ಟು ಹಳೆಯದು ಎಂದು ತಿಳಿದುಕೊಳ್ಳಲು ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಕೋರ್ಟ್ ಇದಕ್ಕೆ ಸಮ್ಮತಿಸರಲಿಲ್ಲ. ಇದೇ ವೇಳೆ, ವಝುಖಾನದಲ್ಲಿರುವುದು ಕಾರಂಜಿಯೇ ಹೊರತು ಶಿವಲಿಂಗವಲ್ಲ ಎಂದು ಮುಸ್ಲಿಮರು ತಮ್ಮ ವಾದವನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ | Gyanvapi Case | ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕ ಶಿವಲಿಂಗದ ರಕ್ಷಣೆ ಮುಂದುವರಿಸಲು ಸುಪ್ರೀಂ ಆದೇಶ

Exit mobile version