ಲಖನೌ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತಿರುವ ಜ್ಞಾನವಾಪಿ ಮಸೀದಿಯ (Gyanvapi Case) ವೈಜ್ಞಾನಿಕ ಸಮೀಕ್ಷೆಯ (Survey) ವರದಿಯನ್ನು ಇನ್ನೂ ಕನಿಷ್ಠ ನಾಲ್ಕು ವಾರ ಬಹಿರಂಗಪಡಿಸಬಾರದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ವಾರಾಣಸಿ ನ್ಯಾಯಾಲಯ (Varanasi Court) ಸೂಚಿಸಿದೆ. ವರದಿ ಬಹಿರಂಗಪಡಿಸಲು ಸಮಯಾವಕಾಶ ಬೇಕು ಎಂದು ಎಎಸ್‌ಐ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಅನುಮತಿ ನೀಡಿದೆ. ಹಾಗೆಯೇ, ಎಎಸ್‌ಐ ವರದಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಜನವರಿ 24ಕ್ಕೆ ಮುಂದೂಡಿಕೆ ಮಾಡಿದೆ.
ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನ ನ್ಯಾಯಾಧೀಶರಿಗೆ ಸಮೀಕ್ಷೆಯ ವರದಿಯ ಪ್ರತಿಯನ್ನು ಸಲ್ಲಿಸಬೇಕಿದೆ. ಹಾಗಾಗಿ, ವರದಿ ಬಹಿರಂಗಗೊಳಿಸಲು ಸಮಯ ಬೇಕು ಎಂದು ಜನವರಿ 3ರಂದು ಎಎಸ್‌ಐ ಅರ್ಜಿ ಸಲ್ಲಿಸಿತ್ತು. ಅದರಂತೆ, ಜನವರಿ 6ರಂದು ವಿಚಾರಣೆ ನಡೆಸಿದ ನ್ಯಾಯಾಲಯವು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಕಳೆದ ವರ್ಷದ ಆಗಸ್ಟ್ 5ರಿಂದ ಜ್ಞಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸಮೀಕ್ಷೆ ಆರಂಭಿಸಿ, ನವೆಂಬರ್ 2ರಂದು ಸಮೀಕ್ಷೆ ಮುಗಿಸಿರುವ ಎಎಸ್‌ಐ, ಡಿಸೆಂಬರ್ 18ರಂದು ಅಲಹಾಬಾದ್ ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು. ವಾರಾಣಸಿಯ ಫಾಸ್ಟ್ ಟ್ರ್ಯಾಕ್‌ಕೋರ್ಟ್‌ಗೆ ವರದಿ ಸಲ್ಲಿಸಿ ಎಂದು ಡಿಸೆಂಬರ್ 19ರಂದು ಹೈಕೋರ್ಟ್ ಎಎಸ್‌ಐಗೆ ಸೂಚಿಸಿತ್ತು. ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ್ದ ವರದಿಯನ್ನೇ ಜನವರಿ 19ರೊಳಗೆ ಸಲ್ಲಿಸಬೇಕು ಎಂದು ಎಎಸ್‌ಐಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಈಗಾಗಲೇ ಸೂಚಿಸಿದೆ.
ಏನಿದು ಪ್ರಕರಣ?
ಕಳೆದ ವರ್ಷದ ಜುಲೈ 21ರಂದು ವಾರಾಣಸಿ ನ್ಯಾಯಾಲಯವು ಮಸೀದಿಯಲ್ಲಿ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಅದರಂತೆ ಮಸೀದಿಯಲ್ಲಿ ಐಎಸ್‌ಐ ಜುಲೈ 24ರಂದು ಸಮೀಕ್ಷೆ ಆರಂಭಿಸಿತ್ತು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್ ಸಮೀಕ್ಷೆಗೆ ತಡೆಯಾಜ್ಞೆ ನೀಡಿದ್ದಲ್ಲದೆ, ಮುಸ್ಲಿಂ ಅರ್ಜಿದಾರರು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿತ್ತು. ಅದರಂತೆ, ಅಂಜುಮಾನ್ ಇಂತೇಜಾಮಿಯಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಸಮೀಕ್ಷೆಗೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿತ್ತು. ಇದಾದ ಬಳಿಕ ಅಲಹಾಬಾದ್ ಹೈಕೋರ್ಟ್ ಸಮೀಕ್ಷೆಗೆ ಅನುಮತಿ ನೀಡಿತ್ತು. ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಕೊನೆಗೆ, ಸುಪ್ರೀಂ ಕೋರ್ಟ್ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿತ್ತು.
ಇದನ್ನೂ ಓದಿ: Gyanvapi Survey: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಮುಸ್ಲಿಮರಿಂದ ಬಹಿಷ್ಕಾರದ ಎಚ್ಚರಿಕೆ; ಮತ್ತೇಕೆ ವಿವಾದ?
ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕೋರಿ ಹಿಂದು ಮಹಿಳೆಯರು 2021ರಲ್ಲಿ ವಾರಾಣಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯವು ಮಸೀದಿಯಲ್ಲಿ ವಿಡಿಯೊ ಸಮೀಕ್ಷೆಗೆ ಅನುಮತಿ ನೀಡಿತ್ತು. ಈಗಾಗಲೇ, ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆ ಮುಗಿದಿದ್ದು, ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿದೆ. ಶಿವಲಿಂಗ ಪತ್ತೆಯಾದ ಕಾರಣ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಲಾಗಿತ್ತು. ಅದರಂತೆ, ವೈಜ್ಞಾನಿಕ ಸಮೀಕ್ಷೆಯು ಮುಗಿದಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಜಾಗದಲ್ಲಿ ಮಂದಿರ: ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ಅಸ್ತು, ಮುಸ್ಲಿಮರ 5 ಅರ್ಜಿ ವಜಾ