ವಾರಾಣಸಿ: ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ (Gyanvapi Mosque Case) ಹಿಂದೂಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಅರ್ಹತೆ ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯನ್ನು ವಾರಾಣಸಿ ನ್ಯಾಯಾಲಯ ವಜಾಗೊಳಿಸಿದೆ.
ಜ್ಞಾನವಾಪಿ ಮಸೀದಿಗೆ ಮುಸ್ಲಿಮರ ಪ್ರವೇಶ ನಿಷೇಧಿಸಿ, ಅದನ್ನು ಹಿಂದೂಗಳ ಸುಪರ್ದಿಗೆ ನೀಡಬೇಕು ಎಂದು ವಿಶ್ವ ವೇದಿಕ್ ಸನಾತನ ಸಂಘ(VVSS)ದ ಪ್ರಧಾನ ಕಾರ್ಯದರ್ಶಿ ಕಿರಣ್ ಸಿಂಗ್ ಅವರು ಕಳೆದ ಮೇ ತಿಂಗಳಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣಾರ್ಹತೆ ಪ್ರಶ್ನಿಸಿ ಮಸೀದಿ ಸಮಿತಿ ಅರ್ಜಿ ಸಲ್ಲಿಸಿದೆ. ಆದರೆ, ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿದೆ.
ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿಯ ಪೂಜೆಗೆ ಅವಕಾಶ ನೀಡಬೇಕು ಎಂದು ಹಿಂದೂ ಮಹಿಳೆಯರು ಕೂಡ ಅರ್ಜಿ ಸಲ್ಲಿಸಿದ್ದು, ಇದರ ಕುರಿತು ಕೂಡ ವಿಚಾರಣೆ ನಡೆಯುತ್ತಿದೆ. ಮಸೀದಿಯ ವಿಡಿಯೊ ಸಮೀಕ್ಷೆ ವೇಳೆ ಪತ್ತೆಯಾದ ಶಿವಲಿಂಗದ ರಕ್ಷಣೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ | Gyanvapi Case | ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕ ಶಿವಲಿಂಗದ ರಕ್ಷಣೆ ಮುಂದುವರಿಸಲು ಸುಪ್ರೀಂ ಆದೇಶ