ವಾರಾಣಸಿಯ ನಯಿ ಸಾದಿಕ್ ಏರಿಯಾದಲ್ಲಿ ಕುಡಿಯುವ ನೀರಿನ ಪೈಪ್ವೊಂದು ಒಡೆದು, ಜನವರಿ 31ರಿಂದ ಒಂದೇಸಮನೆ ರಸ್ತೆಯಲ್ಲಿ ನೀರು ಹರಿಯುತ್ತಿದೆ. ವಾರದಿಂದಲೂ ಒಂದೇ ಸಮನೆ ನೀರು ರಸ್ತೆ ಮೇಲೆ ಹರಿಯುತ್ತಿರುವ ಪರಿಣಾಮ ಅಲ್ಲೆಲ್ಲ ಗುಂಡಿಗಳು ಆಗುತ್ತಿವೆ. ಈಗಾಗಲೇ ಇದ್ದ ಗುಂಡಿಗಳೂ ದೊಡ್ಡದಾಗುತ್ತಿವೆ. ವಾರದಿಂದಲೂ ಕುಡಿಯುವ ನೀರು ಈ ಪರಿ ವ್ಯರ್ಥವಾಗುತ್ತಿದ್ದರೂ, ಸ್ಥಳೀಯ ಆಡಳಿತ ಗಮನಹರಿಸುತ್ತಿಲ್ಲ ಎಂದು ಅಸಮಾಧಾನಗೊಂಡಿರುವ ಮಾಜಿ ಕೌನ್ಸಿಲರ್ ಶಾಹೀದ್ ಅಲಿ ಎಂಬುವರು ಆ ನೀರಿನಲ್ಲಿಯೇ ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನೀರು ಹರಿಯುತ್ತಿರುವ, ಗುಂಡಿ ಬಿದ್ದಿರುವ ರಸ್ತೆಯಲ್ಲಿ ಒಂದೆಡೆ ವಾಹನಗಳು ಸಂಚಾರ ಮಾಡುತ್ತಿದ್ದರೆ, ಇನ್ನೊಂದೆಡೆ ಶಾಹೀದ್ ಅಲಿ ಮಲಗಿಕೊಂಡಿದ್ದನ್ನು ನೋಡಬಹುದು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಶಾಹೀದ್ ಅಲಿ, ‘ನೀರಿನ ಪೈಪ್ ಒಡೆದು, ಕುಡಿಯುವ ನೀರು ಪೋಲಾಗುತ್ತಿರುವ ಬಗ್ಗೆ ಹಲವು ಸಲ ಸ್ಥಳೀಯ ಆಡಳಿತಕ್ಕೆ ತಿಳಿಸಿದೆ. ಆದರೆ ಅಧಿಕಾರಿಗಳು ಕಿವಿಯ ಮೇಲೆಯೇ ಹಾಕಿಕೊಳ್ಳುತ್ತಿಲ್ಲ, ಹೀಗಾಗಿ ನಾನು ಇಂಥ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಕೂಡಲೇ ಇದನ್ನು ಸರಿಪಡಿಸದೆ ಇದ್ದರೆ, ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: PM Narendra Modi | ಜಗತ್ತಿನ ಅತಿ ಉದ್ದದ ರಿವರ್ ಕ್ರೂಸ್ ಎಂವಿ ಗಂಗಾ ವಿಲಾಸ್‌ಗೆ ವಾರಾಣಸಿಯಲ್ಲಿ ಪ್ರಧಾನಿ ಚಾಲನೆ
ವಾರಾಣಸಿ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಈ ನೀರು ಪೋಲು ವಿಚಾರ ದೊಡ್ಡ ಸಂಗತಿಯಾಗಿ ಚರ್ಚೆಯಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ವಿಡಿಯೊ ಶೇರ್ ಮಾಡಿಕೊಂಡು ನೇರವಾಗಿ ನರೇಂದ್ರ ಮೋದಿಯವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ‘ಇದು ಪ್ರಧಾನಿ ಮೋದಿಯವರ ವಾರಾಣಸಿ‘ ‘ಬಿಜೆಪಿಯವರ ಸ್ಮಾರ್ಟ್ ಸಿಟಿ‘ ಎಂದೆಲ್ಲ ವ್ಯಂಗ್ಯವಾಡುತ್ತಿದ್ದಾರೆ.
ಸ್ಪಷ್ಟನೆ ಕೊಟ್ಟ ಜಿಲ್ಲಾಧಿಕಾರಿ
ಪೈಪ್ಲೈನ್ ಕೆಟ್ಟು ನೀರು ಪೋಲಾಗುತ್ತಿರುವ ಕಾರಣಕ್ಕೆ ಶಾಹೀದ್ ಅಲಿ ನೀರು ತುಂಬಿದ ರಸ್ತೆ ಗುಂಡಿಯಲ್ಲಿ ಮುಳುಗಿ ಪ್ರತಿಭಟನೆ ನಡೆಸುತ್ತಿರುವ ಫೋಟೋ-ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಅದು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೇ ಲಿಂಕ್ ಆದ ಬಳಿಕ ವಾರಾಣಸಿ ಜಿಲ್ಲಾಧಿಕಾರಿ ಟ್ವೀಟ್ ಮಾಡಿದ್ದಾರೆ. ‘ನಯಿ ಸಾದಕ್ ಏರಿಯಾದಲ್ಲಿ ನೀರಿನ ಪೈಪ್ ಲೀಕೇಜ್ ಇತ್ತು. ಆ ರಸ್ತೆಯಲ್ಲಿ ಸದಾ ವಾಹನ ಸಂಚಾರ ಇದ್ದೇ ಇರುತ್ತದೆ. ಹಾಗಾಗಿ ಹಗಲು ಸಮಯದಲ್ಲಿ ದುರಸ್ತಿ ಮಾಡಲು ಸಾಧ್ಯವಾಗಿರಲಿಲ್ಲ. ನಾಳೆ ಬೆಳಗ್ಗೆಯೊಳಗೆ ಪೈಪ್ ದುರಸ್ತಿ ಪಡಿಸಲಾಗುವುದು’ ಎಂದು ಹೇಳಿದ್ದಾರೆ.