ನವದೆಹಲಿ: ಮಂಗಳವಾರ ಉತ್ತರಾಖಂಡದ ಕೇದಾರನಾಥ ದೇಗುಲದಲ್ಲಿ (Kedarnath Temple) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಹಾಗೂ ಬಿಜೆಪಿಯ ಸಂಸದ ವರುಣ್ ಗಾಂಧಿ (BJP MP Varun Gandhi) ಪರಸ್ಪರ ಭೇಟಿಯಾದರು. ಈ ಚಿಕ್ಕ ಭೇಟಿಯು ಪರಸ್ಪರ ನಗೆ ವಿನಿಮಯ ಹಾಗೂ ಆನಂದದಿಂದ ತುಂಬಿತ್ತು. ರಾಹುಲ್ ಗಾಂಧಿ ಕೇದಾರನಾಥ ದೇಗುಲದಲ್ಲಿ ದೇವರ ದರ್ಶನ ಪಡೆದುಕೊಂಡು ವಾಪಸ್ ಆಗುತ್ತಿದ್ದರು, ಅದೇ ವೇಳೆಗೆ ವರುಣ್ ಗಾಂಧಿ ತಮ್ಮ ಕುಟುಂಬ ಸಮೇತ ದೇವರ ದರ್ಶನಕ್ಕೆ ಆಗಮಿಸಿದರು. ಈ ವೇಳೆ, ಇಬ್ಬರ ಭೇಟಿ ನಡೆಯಿತು. ವಿಶೇಷವಾಗಿ, ವರುಣ್ ಅವರ ಪುತ್ರಿ ಅನುಸೂಯಾ (Varun Gandhi’s Daughter Anusuiya) ಅವರು ದೊಡ್ಡಪ್ಪ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಬಹಳ ತುಂಬ ಖುಷಿಪಟ್ಟರು ಎಂದು ಮೂಲಗಳು ತಿಳಿಸಿವೆ.
ವರುಣ್ ಗಾಂಧಿ ಅವರು ತಮ್ಮ ಕ್ಷೇತ್ರವಾದ ಪಿಲಿಭಿತ್‌ನಲ್ಲಿ ಸಕ್ರಿಯವಾಗಿದ್ದರೂ ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲವಾದ್ದರಿಂದ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ, ಉಭಯ ನಾಯಕರ ಈ ಕಿರು ಭೇಟಿಯು ರಾಜಕೀಯ ಊಹಾಪೋಹಗಳನ್ನು ಹುಟ್ಟುಹಾಕಿದೆ. ಹಾಗಿದ್ದೂ, ಈ ಸಂಕ್ಷಿಪ್ತ ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಅಲ್ಲಿದ್ದವರು ತಿಳಿಸಿದ್ದಾರೆ.
ಬದರಿನಾಥ ಕೇದಾರನಾಥ ದೇಗುಲ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಮಾತನಾಡಿ, ಕಳೆದ ಮೂರು ದಿನಗಳಿಂದ ರಾಹುಲ್ ಗಾಂಧಿ ಅವರು ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ್ದು, ವರುಣ್ ಗಾಂಧಿ ಅವರು ಬೆಳಗ್ಗೆ ಕೇದಾರನಾಥ ಧಾಮಕ್ಕೆ ಆಗಮಿಸಿದ್ದಾರೆ. ರಾಹುಲ್ ಗಾಂಧಿ ಅವರು ಹಿಂದಿರುಗುವ ಮೊದಲ ವರುಣ್ ಗಾಂಧಿಯನ್ನು ಭೇಟಿಯಾದರು ಎಂದು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ಯಾತ್ರೆಯನ್ನು ಮಾಡುತ್ತಿದ್ದಾಗ, ವರುಣ್ ಗಾಂಧಿಯವರ ಬಗ್ಗೆ ಮತ್ತು ಭಾರತ್ ಜೋಡೋ ನಡಿಗೆಗೆ ವರುಣ್ ಗಾಂಧಿ ಅವರನ್ನು ಸ್ವಾಗತಿಸುತ್ತೀರಾ ಎಂದು ಪತ್ರಕರ್ತರು ಕೇಳಿದ್ದರು. ಆ ಸಮಯದಲ್ಲಿ ರಾಹುಲ್ ಗಾಂಧಿ ಅವರು, ತಮ್ಮ ಸೋದರಸಂಬಂಧಿಯನ್ನು (ವರುಣ್) ಪ್ರೀತಿಯಿಂದ ಭೇಟಿಯಾಗಬಹುದು ಮತ್ತು ಅಪ್ಪಿಕೊಳ್ಳಬಹುದು. ಆದರೆ, ಸಿದ್ಧಾಂತಗಳು ಹೊಂದಿಕೆಯಾಗುವುದಿಲ್ಲ ಎಂದು ಹೇಳಿದರು. “ವರುಣ್ ಗಾಂಧಿ ಬಿಜೆಪಿಯಲ್ಲಿದ್ದಾರೆ, ಅವರು ಇಲ್ಲಿ ಕಾಲಿಟ್ಟರೆ ಅವರಿಗೆ ಸಮಸ್ಯೆಯಾಗಬಹುದು, ನನ್ನ ಸಿದ್ಧಾಂತವು ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ, ನಾನು ಎಂದಿಗೂ ಆರ್‌ಎಸ್‌ಎಸ್ ಕಚೇರಿಗೆ ಹೋಗಲಾರೆ. ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತ, ಆಲೋಚನಾ ವ್ಯವಸ್ಥೆ ಇದೆ. ವರುಣ್ ಒಮ್ಮೆ ಆ ಸಿದ್ಧಾಂತವನ್ನು(ಆರೆಸ್ಸೆಸ್) ಅಳವಡಿಸಿಕೊಂಡಿದ್ದಾನೆ, ಬಹುಶಃ ಈಗಲೂ ಅದರಲ್ಲೇ ಇದ್ದಾನೆ. ನಾನು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಸುದ್ದಿಯನ್ನೂ ಓದಿ: Rahul Gandhi | ಆರೆಸ್ಸೆಸ್ ಕಚೇರಿಗೆ ಕಾಲಿಡುವುದಕ್ಕಿಂತ ಶಿರಚ್ಛೇದವೇ ಲೇಸು! ವರುಣ್ ಗಾಂಧಿ ಕಾಂಗ್ರೆಸ್ ಸೇರ್ಪಡೆ ಪರೋಕ್ಷವಾಗಿ ತಳ್ಳಿಹಾಕಿದ ರಾಹುಲ್
ರಾಹುಲ್ ಗಾಂಧಿಗಿಂತಲೂ ವರುಣ್ ಗಾಂಧಿ ಅವರು 10 ವರ್ಷ ಚಿಕ್ಕವರು. 2011ರಲ್ಲಿ ವರುಣ್ ಗಾಂಧಿ ಅವರ ವಿವಾಹಕ್ಕೆ ಸೋನಿಯಾ ಮತ್ತು ರಾಹುಲ್ ಗಾಂಧಿ ಹಾಜರಾಗಿರಲಿಲ್ಲ. ರಾಹುಲ್ ಅವರ ತಂದೆ ರಾಜೀವ್ ಹಾಗೂ ವರುಣ್ ಅವರ ತಂದೆ ಸಂಜಯ್ ಸಹೋದರರು. ಇಂದಿರಾ ಗಾಂಧಿ ಅವರು ರಾಜಕೀಯ ಉತ್ತರಾಧಿಕಾರಿಯಾಗಿ ಬೆಳೆಯುತ್ತಿದ್ದ ಸಂಜಯ್ ಗಾಂಧಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟರು. ಬಳಿಕ, ರಾಜೀವ್ ಗಾಂಧಿ ಅನಿವಾರ್ಯವಾಗಿ ರಾಜಕಾರಣಕ್ಕೆ ಇಳಿಯಬೇಕಾಯಿತು.