ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ ಪ್ರತಿಪಕ್ಷಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಅದರಲ್ಲೂ, ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುವುದರಿಂದ ಪ್ರತಿಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಶತಾಯ-ಗತಾಯ ಸೋಲಿಸಲು (Opposition Unity) ಸಜ್ಜಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಸೋಮವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ದೆಹಲಿಯ ರಾಜಾಜಿ ಮಾರ್ಗ 10ರಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಿತೀಶ್ ಕುಮಾರ್ ಜತೆ ಸಭೆ ನಡೆದಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿ, ಬಿಜೆಪಿಯನ್ನು ಹೇಗೆ ಕಟ್ಟಿಹಾಕಬೇಕು ಎಂಬ ಕುರಿತು ಚರ್ಚಿಸಲಾಗಿದೆ. ಅದರಲ್ಲೂ, ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಿ, ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂಬ ಕುರಿತು ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
ಖರ್ಗೆ ನಿವಾಸದಲ್ಲಿ ಸಭೆ
ಒಂದೆರಡು ದಿನದಲ್ಲಿ ಸಭೆ ಎಂದ ಕಾಂಗ್ರೆಸ್
“ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆದಿದೆ. ಜೆಡಿಯು ಮುಖ್ಯಸ್ಥ ಲಲನ್ ಸಿಂಗ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಒಂದೆರಡು ದಿನದಲ್ಲಿಯೇ ಹೆಚ್ಚಿನ ಪ್ರಮಾಣದ ಪ್ರತಿಪಕ್ಷಗಳ ಸಭೆ ನಡೆಸಲಾಗುತ್ತದೆ. ಶೀಘ್ರದಲ್ಲಿಯೇ ಸಭೆಯ ದಿನಾಂಕ ಹಾಗೂ ಸ್ಥಳದ ಕುರಿತು ಮಾಹಿತಿ ನೀಡಲಾಗುತ್ತದೆ” ಎಂದು ಸಭೆಯ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.
ವೇಣುಗೋಪಾಲ್ ಮಹತ್ವದ ಮಾಹಿತಿ
“ಎಲ್ಲ ಪ್ರತಿಪಕ್ಷಗಳು ಒಗ್ಗೂಡಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಕುರಿತು ಕಾರ್ಯತಂತ್ರ ರೂಪಿಸಲಾಗುತ್ತದೆ. ಇದಕ್ಕಾಗಿ ಮೊದಲು ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸಲು ಪ್ರತಿಪಕ್ಷಗಳ ದೊಡ್ಡ ಸಭೆ ಕರೆಯಲಾಗುತ್ತದೆ. ದೇಶವೇ ಈಗ ಒಗ್ಗಟ್ಟಾಗಿದೆ. ಬಲಿಷ್ಠ ಪ್ರಜಾಪ್ರಭುತ್ವದ ಸಂದೇಶ ಸಾರುವುದೇ ನಮ್ಮ ಉದ್ದೇಶವಾಗಿದೆ. ದೇಶಕ್ಕೇ ಹೊಸ ದಿಕ್ಕು ನೀಡುವುದು ನಮ್ಮೆಲ್ಲರ ಗುರಿ” ಎಂದು ಹೇಳಿದರು.
ಇದನ್ನೂ ಓದಿ: Opposition Unity: ಪ್ರತಿಪಕ್ಷಗಳ ಒಗ್ಗಟ್ಟಿಗಾಗಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆಯನ್ನು ಭೇಟಿ ಮಾಡಲಿದ್ದಾರೆ ಬಿಹಾರ ಸಿಎಂ ನಿತೀಶ್
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಳೆದ ಕೆಲವು ವರ್ಷದಿಂದಲೂ ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಕೂಡ ಟಿಎಂಸಿಯ ಮಮತಾ ಬ್ಯಾನರ್ಜಿ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಜೆಡಿಯುನ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದರು. ಬಿಹಾರದಲ್ಲಿ ಎನ್‌ಡಿಎ ಜತೆಗಿನ ಮೈತ್ರಿ ಮುರಿದುಕೊಂಡ ಬಳಿಕ ನಿತೀಶ್ ಕುಮಾರ್ ಅವರೂ ಪ್ರತಿಪಕ್ಷಗಳ ಒಗ್ಗಟ್ಟಿಗೆ ಶ್ರಮಿಸುತ್ತಿದ್ದಾರೆ.