Site icon Vistara News

Veerappan Daughter: ಲೋಕಸಭೆ ಕಣಕ್ಕಿಳಿದ ಕಾಡುಗಳ್ಳ ವೀರಪ್ಪನ್‌ ಪುತ್ರಿ; ಈ ಪಕ್ಷದಿಂದ ಟಿಕೆಟ್

Veerappan And Vidhya Rani

Veerappan's daughter Vidhya Rani to contest Lok Sabha polls from Tamil Nadu's Krishnagiri

ಚೆನ್ನೈ: ತಮಿಳುನಾಡು ಹಾಗೂ ಕರ್ನಾಟಕದ ಕಾಡುಗಳ್ಳ, ಆನೆ ದಂತ ಚೋರ ವೀರಪ್ಪನ್‌ ಪುತ್ರಿ (Veerappan Daughter) ವಿದ್ಯಾರಾಣಿ (Vidhya Rani) ಅವರು ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸಲು ಮುಂದಾಗಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಲೋಕಸಭೆ ಕ್ಷೇತ್ರದಲ್ಲಿ ನಾಮ್‌ ತಮಿಳರ್ ಕಚ್ಚಿ‌ (NTK) ಪಕ್ಷದಿಂದ ವಿದ್ಯಾರಾಣಿ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಈ ಕುರಿತು ಎನ್‌ಟಿಕೆ ಪಕ್ಷದ ಮುಖ್ಯಸ್ಥ ಸೀಮನ್‌ ಅವರೇ ಘೋಷಣೆ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ವಿದ್ಯಾರಾಣಿ ಅವರು ಎನ್‌ಟಿಕೆ ಪಕ್ಷವನ್ನು ಸೇರ್ಪಡೆಯಾಗಿದ್ದರು. ನಟ-ನಿರ್ದೇಶಕ ಸೀಮನ್‌ ನೇತೃತ್ವದ ಪಕ್ಷ ಸೇರಿದ್ದರು. “ವಿದ್ಯಾರಾಣಿ ಅವರು ತಮಿಳುನಾಡಿನ ಕೃಷ್ಣಗಿರಿ ಲೋಕಸಭೆ ಕ್ಷೇತ್ರದಲ್ಲಿ ಎನ್‌ಟಿಕೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ” ಎಂಬುದಾಗಿ ಎನ್‌ಟಿಕೆ ಮುಖ್ಯಸ್ಥ ಸೀಮನ್‌ ಮಾಹಿತಿ ನೀಡಿದ್ದಾರೆ. ಎಲ್‌ಟಿಟಿಇ ನಾಯಕ ವಿ. ಪ್ರಭಾಕರನ್‌ನಿಂದ ಪ್ರೇರೇಪಿತರಾಗಿ ಸೀಮನ್‌ ಅವರು ಎನ್‌ಟಿಕೆ ಪಕ್ಷ ಸ್ಥಾಪಿಸಿದ್ದಾರೆ. ಇದು ಕೂಡ ಚರ್ಚೆಗೆ ಗ್ರಾಸವಾಗಿತ್ತು.

ವಿದ್ಯಾರಾಣಿ ವೃತ್ತಿ ವಕೀಲಿಕೆ

ವಿದ್ಯಾರಾಣಿ ಅವರು ವೃತ್ತಿಯಿಂದ ವಕೀಲರಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ಐದು ವರ್ಷ ಕಾನೂನು ಅಧ್ಯಯನ ಮಾಡಿದ್ದಾರೆ. ಅಷ್ಟೇ ಅಲ್ಲ, ಕೃಷ್ಣಗಿರಿಯಲ್ಲಿ ಇವರು ಶಾಲೆಯೊಂದನ್ನು ಮುನ್ನಡೆಸುತ್ತಿದ್ದಾರೆ. ಆ ಮೂಲಕ ಬಡಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. 2020ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ವಿದ್ಯಾರಾಣಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಘಟಕದ ಉಪಾಧ್ಯಕ್ಷೆಯಾಗಿದ್ದರು. ಬಳಿಕ ಇವರು ಎನ್‌ಟಿಕೆ ಸೇರ್ಪಡೆಯಾಗಿದ್ದಾರೆ. ಇವರ ತಾಯಿ ಮುತ್ತುಲಕ್ಷ್ಮೀ ಅವರು ಶಾಸಕ ಟಿ. ವೇಲ್‌ಮುರುಗನ್‌ ನೇತೃತ್ವದ ಪಕ್ಷದಲ್ಲಿದ್ದಾರೆ.

ಇದನ್ನೂ ಓದಿ: BJP Candidates: ಬಿಜೆಪಿ 4ನೇ ಪಟ್ಟಿ ಪ್ರಕಟ; ನಟಿ ರಾಧಿಕಾ ಸೇರಿ 15 ಜನಕ್ಕೆ ಟಿಕೆಟ್‌, ಇಲ್ಲಿದೆ ಲಿಸ್ಟ್

ಕರ್ನಾಟಕ ಹಾಗೂ ತಮಿಳುನಾಡು ಗಡಿಯ ಗೋಪಿನಾಥಮ್‌ನಲ್ಲಿರುವ ತನ್ನ ಅಜ್ಜನ ಮನೆಯಲ್ಲಿ ವಿದ್ಯಾರಾಣಿ ಅವರು ಮೊದಲ ಬಾರಿಗೆ ತನ್ನ ತಂದೆ ವೀರಪ್ಪನ್‌ನನ್ನು ಭೇಟಿಯಾಗಿದ್ದರು. ಆಗ ವಿದ್ಯಾರಾಣಿ ಮೂರನೇ ತರಗತಿಯಲ್ಲಿ ಓದುತ್ತಿದ್ದರು. ನಟ ಡಾ.ರಾಜಕುಮಾರ್‌ ಅಪಹರಣ, ಶ್ರೀಗಂಧದ ಮರಗಳ ಕಳ್ಳಸಾಗಣೆ, ಆನೆ ದಂತಗಳ ಕಳ್ಳಸಾಗಣೆ ಸೇರಿ ಹಲವು ಪ್ರಕರಣಗಳಲ್ಲಿ ಕರ್ನಾಟಕ ಹಾಗೂ ತಮಿಳುನಾಡಿಗೆ ತಲೆನೋವಾಗಿದ್ದ ವೀರಪ್ಪನ್‌ನನ್ನು 2004ರ ಅಕ್ಟೋಬರ್‌ 18ರಂದು ಎನ್‌ಕೌಂಟರ್‌ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version