Site icon Vistara News

Road Accident: ಕಣಿವೆಗೆ ಉರುಳಿದ ಕಾರು; ಐವರು ಮಕ್ಕಳು ಸೇರಿ 8 ಮಂದಿ ಸಾವು

Road Accident

Vehicle falls into gorge in Jammu and Kashmir's Anantnag, 5 children among 8 dead

ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ಅನಂತ್‌ನಾಗ್‌ ಜಿಲ್ಲೆಯಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಟಾಟಾ ಸುಮೋ ಕಾರೊಂದು ಕಣಿವೆಗೆ ಉರುಳಿದ್ದು, ಐವರು ಮಕ್ಕಳು ಸೇರಿ 8 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಜಮ್ಮು-ಕಾಶ್ಮೀರದ ದಕ್ಸುಮ್‌ ಪ್ರದೇಶದಲ್ಲಿ ಕಾರು ನಿಯಂತ್ರಣ ತಪ್ಪಿ, ಕಣಿವೆಗೆ ಉರುಳಿದೆ ಎಂಬುದಾಗಿ ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ದಕ್ಸುಮ್‌ ಪ್ರದೇಶದಿಂದ ಸುಮಾರು 20 ಕಿಲೋಮೀಟರ್‌ ದೂರದಲ್ಲಿರುವ ಆರ್ಶುನ್‌ ಹಟ್‌ ಎಂಬ ಪ್ರದೇಶದಲ್ಲಿ ಕಾರು ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಕಾರು ಕಣಿವೆಗೆ ಉರುಳುತ್ತಲೇ ಅವರ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಇನ್ನೂ ಕಾರನ್ನು ಮೇಲಕ್ಕೆ ಎತ್ತಿಲ್ಲ. ಶವಗಳನ್ನು ಕೂಡ ಮೇಲೆ ಎತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಮೃತರ ಕುರಿತು ಕೂಡ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಜಮ್ಮು-ಕಾಶ್ಮೀರವು ಕಣಿವೆ ಪ್ರದೇಶವಾದ ಕಾರಣ ವಾಹನಗಳು ಹೆಚ್ಚಾಗಿ ಕಣಿವೆಗೆ ಉರುಳುತ್ತವೆ. ರಾಜೌರಿ ಜಿಲ್ಲೆಯಲ್ಲಿ ಕಳೆದ ಜೂನ್‌ನಲ್ಲಿ ಸೇನೆಯ ವಾಹನವೊಂದು ಕಂದಕಕ್ಕೆ ಉರಳಿ ಒಬ್ಬ ಯೋಧ ಮೃತಪಟ್ಟಿದ್ದರು ಹಾಗೆಯೇ, ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಯೋಧರನ್ನು ಸೇನೆಯ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ನೀಡಲಾಗಿತ್ತು.

ನೌಶೇರಾ ಸೆಕ್ಟರ್‌ ಬಳಿಯ ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಭವಾನಿ ಗ್ರಾಮದ ಮೂಲಕ ಸೇನಾ ವಾಹನವು ಸಂಜೆ ತೆರಳುತ್ತಿತ್ತು. ವಾಹದಲ್ಲಿ ಐವರು ಯೋಧರು ಇದ್ದರು. ಇದೇ ವೇಳೆ, ವಾಹನವು ಚಾಲಕನ ನಿಯಂತ್ರಣ ತಪ್ಪಿದ್ದು, ಕಂದಕಕ್ಕೆ ಉರುಳಿತ್ತು. ದುರಂತ ಸಂಭವಿಸುತ್ತಲೇ ಐವರೂ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟೊತ್ತಿಗಾಗಲೇ ಒಬ್ಬ ಯೋಧ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಕಳೆದ ವರ್ಷ ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸುಮಾರು 55 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಒಂದು 300 ಅಡಿ ಆಳದ ಕಣಿವೆಗೆ ಬಿದ್ದು, 38 ಜನ ಮೃತಪಟ್ಟಿದ್ದರು. ಅಸ್ಸಾರ್‌ ಪ್ರದೇಶದ ತ್ರುಂಗಲ್‌ ಬಳಿ ಚಲಿಸುತ್ತಿದ್ದ ಬಸ್‌ ಕಂದಕಕ್ಕೆ ಉರುಳಿತ್ತು. ಕಿಶ್ತ್‌ವಾರ್‌ನಿಂದ ಜಮ್ಮುವಿಗೆ ತೆರಳುತ್ತಿದ್ದ ವೇಳೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿತ್ತು.

ಇದನ್ನೂ ಓದಿ: Viral Video: ಅಪಘಾತವಾದ ಲಾರಿಯಿಂದ ಜ್ಯೂಸ್‌ ಪ್ಯಾಕ್‌ ಎತ್ತಿಕೊಂಡ ಐಫೋನ್‌ಧಾರಿ! ದೊಡ್ಡವರ ಸಣ್ಣತನ ಎಂದ ನೆಟ್ಟಿಗರು

Exit mobile version