Site icon Vistara News

VHP: ಹಿಂದು ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಮರ ವ್ಯಾಪಾರ ನಿಷೇಧಿಸಿ; ರಾಜ್ಯ ಸರ್ಕಾರಗಳಿಗೆ ವಿಎಚ್‌ಪಿ ಮನವಿ

VHP

VHP

ನವದೆಹಲಿ: ಮುಸ್ಲಿಮರು ತಮ್ಮ ಗುರುತನ್ನು ಮರೆಮಾಚುವ ಮೂಲಕ ವಿವಿಧ ಹಿಂದು ಯಾತ್ರಾ ಸ್ಥಳಗಳಲ್ಲಿ ಪೂಜಾ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಿಶ್ವ ಹಿಂದು ಪತಿಷತ್‌ (VHP) ದೂರಿದೆ. ಹಿಂದೂಗಳ ನಂಬಿಕೆಗೆ ಧಕ್ಕೆ ಉಂಟು ಮಾಡುವ ಅಂತಹ ಅಂಗಡಿಗಳಿಗೆ ನಿಷೇಧ ಹೇರಬೇಕು ಮತ್ತು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದೆ.

ವಿಚ್‌ಪಿ ಪ್ರಧಾನ ಕಾರ್ಯದರ್ಶಿ ಬಜರಂಗ್ ಬಾಗ್ರಾ ಅವರು ಈ ಬಗ್ಗೆ ಮಾತನಾಡಿ, ʼʼದೇವಾಲಯಗಳು ಮತ್ತು ಇತರ ಹಿಂದೂ ಧಾರ್ಮಿಕ ಸ್ಥಳಗಳ ಬಳಿ ಪೂಜಾ ವಸ್ತುಗಳನ್ನು ಮಾರಾಟ ಮಾಡುವ ಅಲ್ಪಸಂಖ್ಯಾತ ಸಮುದಾಯದ ಯಾರಾದರೂ ಕಂಡುಬಂದರೆ ತಕ್ಷಣ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕುʼʼ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

“ಕೇದಾರನಾಥದಂತಹ ಕೆಲವು ಹಿಂದೂ ಯಾತ್ರಾ ಸ್ಥಳಗಳಲ್ಲಿ ಮುಸ್ಲಿಮರು ಅಂಗಡಿಗಳನ್ನು ತೆರೆದು ಭಕ್ತರಿಗೆ ಪ್ರಸಾದ ಮತ್ತು ಇತರ ಪೂಜಾ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಮಗೆ ಕೆಲವು ಮಾಹಿತಿ ಬಂದಿದೆ. ಕಾನೂನಾತ್ಮಕವಾಗಿ, ಯಾರಿಗೂ ಅದರ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ” ಎಂದು ಬಾಗ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದುವರಿದು, “ಆದರೆ ಮುಸ್ಲಿಂ ಅಂಗಡಿಯವರು ಗ್ರಾಹಕರಿಗೆ ನೀಡುವ ಮೊದಲು ಆಹಾರ, ಪಾನೀಯಗಳು ಮತ್ತು ಇತರ ವಸ್ತುಗಳ ಮೆಲೆ ಉಗುಳುವ ಅನೇಕ ಪ್ರಸಂಗ ವಿವಿಧೆಡೆ ಕಂಡುಬಂದಿದೆ. ಆದ್ದರಿಂದ ಮುಸ್ಲಿಮರು ಧಾರ್ಮಿಕ ಸ್ಥಳಗಳಲ್ಲಿ ಅಂಗಡಿಗಳನ್ನು ನಡೆಸುವುದು ಮತ್ತು ಪ್ರಸಾದ ಮತ್ತು ಪೂಜಾ ವಸ್ತುಗಳನ್ನು ಮಾರಾಟ ಮಾಡುವುದು ಕಳವಳ ಹುಟ್ಟುಹಾಕಿದೆʼʼ ಎಂದು ಹೇಳಿದ್ದಾರೆ.

ʼʼಇದೇ ಕಾರಣಕ್ಕೆ ಮುಸ್ಲಿಮರು ಯಾವುದೇ ಹಿಂದೂ ಧಾರ್ಮಿಕ ಸ್ಥಳದಲ್ಲಿ ಪೂಜಾ ವಸ್ತುಗಳನ್ನು ಮಾರಾಟ ಮಾಡದಂತೆ ಎಲ್ಲ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆʼʼ ಎಂದು ಬಾಗ್ರಾ ವಿವರಿಸಿದ್ದಾರೆ. ʼʼಹಿಂದೂಗಳ ನಂಬಿಕೆಗೆ ಧಕ್ಕೆಯಾಗದಿರಲು ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಬೇಕುʼʼ ಎಂದು ಅವರು ಆಗ್ರಹಿಸಿದ್ದಾರೆ.

ಮುಸ್ಲಿಮರು ತಮ್ಮ ಗುರುತನ್ನು ಮರೆಮಾಚುವ ಮೂಲಕ ವಿವಿಧ ದೇವಾಲಯಗಳು ಮತ್ತು ಹಿಂದೂ ಧಾರ್ಮಿಕ ಸ್ಥಳಗಳ ಬಳಿ ಪೂಜಾ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರೂ ಆರೋಪಿಸಿದ್ದಾರೆ. ಅಂತಹ ಅಂಗಡಿ ಮಾಲೀಕರನ್ನು ಗುರುತಿಸಿ ತಕ್ಷಣ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸ್ಥಳೀಯ ಆಡಳಿತಗಳು ಇಂತಹ ದೂರುಗಳ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಹಿಂದೂ ಧಾರ್ಮಿಕ ಸ್ಥಳಗಳ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Dharma Dangal‌ : ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಧರ್ಮ ದಂಗಲ್‌ ಬಿಸಿ

ರಾಜ್ಯದಲ್ಲಿಯೂ ನಡೆದಿತ್ತು ಧರ್ಮ ದಂಗಲ್‌

ಕಳೆದ ವರ್ಷ ಈ ವಿಚಾರವಾಗಿ ರಾಜ್ಯದಲ್ಲಿಯೂ ಕೋಲಾಹಲ ಎದ್ದಿತ್ತು. ಹಿಂದೂ ಧಾರ್ಮಿಕ ಕೇಂದ್ರಗಳ ಜಾತ್ರೆ, ಉತ್ಸವ ಸಂದರ್ಭದಲ್ಲಿ ಅನ್ಯ ಮತೀಯ ವ್ಯಾಪಾರಿಗಳಿಗೆ ಪ್ರವೇಶ ನಿಷೇಧಿಸಿ ವಿವಿಧ ದೇವಸ್ಥಾನಗಳಲ್ಲಿ ನೋಟಿಸ್‌ ಅಳವಡಿಸಲಾಗಿತ್ತು. ಇದು ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು.

Exit mobile version