ನವ ದೆಹಲಿ: ಲೈಂಗಿಕ ಸುಖದ ಬಗ್ಗೆ ಅತಿಯಾದ ಭ್ರಮೆಗಳನ್ನು ಕಟ್ಟಿಕೊಂಡಿದ್ದ ನವವಿವಾಹಿತನೊಬ್ಬ ಸುದೀರ್ಘಾವಧಿಯ ಸೆಕ್ಸ್ ಸಂಭ್ರಮದ ಬೆನ್ನು ಬಿದ್ದು ಇದೀಗ ಜೀವನ ಪರ್ಯಂತ ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿದ್ದಾನೆ. ಅವನ ವಿಪರೀತ ದುರಾಸೆಗೆ ಬೇಸತ್ತು ಅವನ ಹೆಂಡತಿಯೇ ಬಿಟ್ಟುಹೋಗಿದ್ದಾಳೆ. ಮದುವೆಯಾದ ಸಂಭ್ರಮದಲ್ಲಿದ್ದ ಈ ಯುವಕ ಗೆಳೆಯರ ಮಾತು ಕೇಳಿ ವಿಪರೀತ ವಯಾಗ್ರ (viagra) ಸೇವಿಸಿ ಬಿಟ್ಟಿದ್ದಾನೆ. ನಿಮಿರು ದೌರ್ಬಲ್ಯ ಹೊಂದಿರುವವರಿಗೆ ಸಹಕಾರಿಯಾಗಿರುವ ಈ ಔಷಧವೂ ಅವನಲ್ಲಿ ಭರ್ಜರಿಯಾಗಿ ಪರಿಣಾಮ ಬೀರಿದೆ. ಆತನ ಪರಿಸ್ಥಿತಿ ಹೇಗಿದೆ ಎಂದರೆ 20 ದಿನ ಕಳೆದರೂ ನಿಮಿರುವಿಕೆ ಹಾಗೇನೇ ಉಳಿದಿದೆ. ಅಷ್ಟೇ ಅಲ್ಲ, ಅದು ಜೀವನ ಪರ್ಯಂತ ಇದೇ ರೀತಿ ಇರುವ ಅಪಾಯವೂ ಇದೆ ಎಂದು ವೈದ್ಯರು ಹೇಳಿದ್ದಾರೆ. ಯುವಕ ಈಗ ನೋವಿನಿಂದ ನರಳುತ್ತಿದ್ದಾನೆ.
ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ. ಯುವಕ ತನ್ನ ದಾಂಪತ್ಯ ಜೀವನದ ಪರಮ ಸುಖಗಳನ್ನು ಹೇಳಿಕೊಂಡನೋ ಅಥವಾ ತನ್ನ ದೌರ್ಬಲ್ಯಗಳ ಬಗ್ಗೆ ಹೇಳಿಕೊಂಡನೋ ಗೊತ್ತಿಲ್ಲ. ಆದರೆ, ಸ್ನೇಹಿತರೆಲ್ಲ ಸೇರಿ ಅವನಿಗೆ ವಯಾಗ್ರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸ್ನೇಹಿತರ ಮಾತು ಕೇಳಿದ ಯುವಕ ಕೆಲವು ದಿನಗಳ ಕಾಲ ನಿರಂತರವಾಗಿ 200 ಮಿಲಿ ಗ್ರಾಂ ಸಾಮರ್ಥ್ಯದ ಮಾತ್ರೆಗಳನ್ನು ತೆಗೆದುಕೊಳ್ಳತೊಡಗಿದ. ಸಾಮಾನ್ಯವಾಗಿ ವೈದ್ಯರು ಸಾಕಷ್ಟು ಪರೀಕ್ಷೆಗಳನ್ನು ನಡೆಸಿ ಗರಿಷ್ಠ 50 ಮಿಲಿ ಗ್ರಾಂನ ಮಾತ್ರೆ ಸೇವಿಸಲು ಸಲಹೆ ನೀಡುತ್ತಾರೆ. ಆದರೆ, ಇವನು ನಾಲ್ಕು ಪಟ್ಟು ಸಾಮರ್ಥ್ಯದ ಮಾತ್ರೆಯನ್ನು ಅದೂ ದಿನವೂ ತೆಗೆದುಕೊಳ್ಳತೊಡಗಿದ್ದ!
ಈ ಮಾತ್ರೆಗಳ ಫಲವಾಗಿ ನಿಮಿರುವಿಕೆ ಎಷ್ಟರ ಮಟ್ಟಿಗೆ ಆಯಿತೆಂದರೆ ಅದು 20 ದಿನವಾದರೂ ಹಾಗೇ ಉಳಿದಿತ್ತು. ಯುವಕನಿಗೆ ಹೇಳಲೂ ಆಗದ, ಮುಚ್ಚಿಟ್ಟುಕೊಳ್ಳಲೂ ಆಗದ ಸಂಕಟ ಎದುರಾಯಿತು. ವಿಪರೀತವಾಗಿ ನಡೆದುಕೊಳ್ಳುವ ಗಂಡನ ವರ್ತನೆಯಿಂದ ಸಿಟ್ಟಿಗೆದ್ದ ಹೆಂಡತಿ ತನ್ನ ತವರು ಮನೆಗೆ ಹೊರಟುಬಿಟ್ಟಳು. ಮನೆಯವರೆಲ್ಲ ಸೇರಿ ಆಕೆಯ ಮನವೊಲಿಸಿ ಮರಳಿ ಕರೆತಂದರಾದರೂ ಆಕೆ ಬಂದವಳೇ ಗಂಡನನ್ನು ಆಸ್ಪತ್ರೆಗೆ ಸೇರಿಸಿ ಮತ್ತೆ ತವರಿಗೆ ಮರಳಿದ್ದಾಳೆ.
ವೈದ್ಯರು ಅತಿಯಾದ ನಿಮಿರುವಿಕೆ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಲು ಸಣ್ಣದೊಂದು ಸರ್ಜರಿ ಮಾಡಿದ್ದಾರಾದರೂ ಸಮಸ್ಯೆಗೆ ಪೂರ್ಣ ಪರಿಹಾರ ಸಿಕ್ಕಿಲ್ಲ. ಇನ್ನು ಮುಂದೆಯೂ ಅತಿಯಾದ ನಿಮಿರುವಿಕೆ ಹಾಗೇ ಇರುತ್ತದೆ. ತನ್ನ ಖಾಸಗಿ ಭಾಗವನ್ನು ಟೈಟ್ ಆದ ಬಟ್ಟೆ ಕಟ್ಟಿಕೊಂಡೇ ಬಚ್ಚಿಟ್ಟುಕೊಳ್ಳಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗಂತ ಮಕ್ಕಳಾಗುವುದಕ್ಕೆ ಸಮಸ್ಯೆ ಏನೂ ಇಲ್ಲ. ಕೆಲವು ಸಮಯದಲ್ಲಿ ಸಾಮಾನ್ಯ ಜೀವನಕ್ಕೆ ಮರಳಬಹುದು ಎಂದಿದ್ದಾರೆ. ಈಗ ಮರಳಬೇಕಾಗಿರುವುದು ಹೆಂಡತಿ!
ವಯಾಗ್ರ ಸೇವಿಸುವ ಮುನ್ನ
ಸಿಲ್‌ಡೆಫನಿಲ್ ಎಂಬ ವೈಜ್ಞಾನಿಕ ಹೆಸರಿನ ವಯಾಗ್ರ 1990ರ ದಶಕದಲ್ಲಿ ಮ್ಯಾಜಿಕ್ ಔಷಧವಾಗಿ ಜಗತ್ತಿನ ಗಮನ ಸೆಳೆಯಿತು. ಲೈಂಗಿಕ ದೌರ್ಬಲ್ಯ ಹೊಂದಿದವರಿಗೆ ಇದು ರಾಮ ಬಾಣ ಎಂದು ಪ್ರಚಾರವಾಗಿತ್ತು. ರಕ್ತ ನಾಳಗಳಲ್ಲಿ ರಕ್ತ ಪರಿಚಲನೆಯನ್ನು ಸುಲಲಿತಗೊಳಿಸಿ ದೇಹದ ಒಂದೇ ಭಾಗಕ್ಕೆ ಅದು ಸಂಚರಿಸುವಂತೆ ಮಾಡುವ ವಿಶಿಷ್ಟ ಶಕ್ತಿಯನ್ನು ಈ ಔಷಧ ಹೊಂದಿದೆ. ಹೀಗಾಗಿ ನಿಮಿರು ದೌರ್ಬಲ್ಯವನ್ನು ನಿವಾರಿಸಲು ಇದನ್ನು ಬಳಸಲಾಗುತ್ತಿತ್ತು.
ಆದರೆ, ಇದರಲ್ಲಿ ಬಳಸುವ ರಾಸಾಯನಿಕಗಳು ಎದೆನೋವು, ಹೃದಯ ಸಮಸ್ಯೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಲಾಗಿತ್ತು. ಯಾವ ಕಾರಣಕ್ಕೂ ಹೃದಯದ ಸಮಸ್ಯೆ ಇರುವವರು ವಯಾಗ್ರ ತೆಗೆದುಕೊಳ್ಳಲೇಬಾರದು ಎಂದು ಸಲಹೆ ನೀಡಲಾಗಿದೆ. ಯಾರಾದರೂ ತಮ್ಮ ಸಮಸ್ಯೆಗಾಗಿ ವಯಾಗ್ರ ತೆಗೆದುಕೊಳ್ಳಲು ಬಯಸಿದರೆ ವೈದ್ಯರನ್ನು ಕಂಡು ಪರೀಕ್ಷೆ ನಡೆಸಿಯೇ ತಮ್ಮ ಡೋಸೇಜ್‌ನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಇದನ್ನೂ ಓದಿ| No Tobacco Day: ಧೂಮಪಾನದಿಂದ ಲೈಂಗಿಕ ಸುಖಕ್ಕೆ ಹೊಗೆ!