Site icon Vistara News

NEET Result 2023: 4 ವರ್ಷದಿಂದ ಗಂಗಾರತಿ ಮಾಡುತ್ತಿದ್ದವನಿಗೆ ಒಲಿದ ಜ್ಞಾನಗಂಗೆ; ನೀಟ್‌ನಲ್ಲಿ ಸಿಕ್ಕಿತು ರ‍್ಯಾಂಕ್

Vibhu Upadhyay, who regularly performs Ganga Aarti

Vibhu Upadhyay, who regularly performs Ganga Aarti clears the NEET

ಲಖನೌ: ಭಾರತದಲ್ಲಿ ಯಾವುದೇ ಕೆಲಸಕ್ಕೆ ಮುಂದಾಗಲಿ, ಭಕ್ತಿ-ಭಾವದೊಂದಿಗೆ ಆ ಕೆಲಸಕ್ಕೆ ಅಣಿಯಾಗುವುದು ಸಂಸ್ಕೃತಿ, ನಂಬಿಕೆ. ಹೊಸ ಬೈಕ್‌, ಕಾರು ತೆಗೆದುಕೊಂಡರೂ ಪೂಜೆ ಮಾಡುವ, ದೇವರಿಗೆ ನಮಸ್ಕರಿಸಿಯೇ ಪರೀಕ್ಷೆಗೆ ಹೋಗುವ ಆಚರಣೆ ಇದೆ. ಇದೇ ನಂಬಿಕೆ, ಭಕ್ತಿಯಿಂದ ಕಳೆದ ನಾಲ್ಕು ವರ್ಷದಿಂದ ಉತ್ತರ ಪ್ರದೇಶದ ಗಂಗಾ ನದಿ ತೀರದಲ್ಲಿ ಗಂಗಾರತಿ ಮಾಡುತ್ತಿದ್ದ ಬದೌನ್‌ ನಿವಾಸಿ ವಿಭು ಉಪಾಧ್ಯಾಯ ಎಂಬುವರು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET Result 2023) ತೇರ್ಗಡೆಯಾಗಿದ್ದಾರೆ.

ಹೌದು, ಬಾಲ್ಯದಿಂದಲೂ ವೈದ್ಯನಾಗುವ ಕನಸು ಕಾಣುತ್ತಿರುವ ವಿಭು ಉಪಾಧ್ಯಾಯ ಅವರು ನಿತ್ಯವೂ ಭಕ್ತಿ-ಭಾವದಿಂದ ಗಂಗಾನದಿಯ ತೀರದಲ್ಲಿ ಗಂಗಾರತಿ ಮಾಡಿದ್ದು, ಅಷ್ಟೇ ಭಕ್ತಿ-ಭಾವದಿಂದ ಅಧ್ಯಯನವೂ ನಡೆಸಿದ್ದಾರೆ. ಭಕ್ತಿ ಹಾಗೂ ಶ್ರದ್ಧೆಯಿಂದ ಓದಿದ ಅವರೀಗ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ನೀಟ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತಮ ರ‍್ಯಾಂಕ್‌ ಪಡೆದುಕೊಂಡಿರುವ ಇವರಿಗೆ ಸುಲಭವಾಗಿ ವೈದ್ಯಕೀಯ ಕೋರ್ಸ್‌ಗೆ ಸೀಟ್‌ ಸಿಗಲಿದೆ.‌

9ನೇ ತರಗತಿಯಿಂದ ಅಧ್ಯಯನ

ನೀಟ್‌ ತೇರ್ಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವೈದ್ಯನಾಗಬೇಕು ಎಂಬುದು ನನ್ನ ಬಹುವರ್ಷಗಳ ಗುರಿಯಾಗಿದೆ. ನಾನು ನೀಟ್‌ಗಾಗಿ 9ನೇ ತರಗತಿಯಿಂದಲೇ ಓದಲು ಆರಂಭಿಸಿದೆ. ಹಾಗಾಗಿ, ನಾನು ಸುಲಭವಾಗಿ ನೀಟ್‌ ಪಾಸಾಗಲು ಸಾಧ್ಯವಾಯಿತು. ಹಾಗೆಯೇ, ನಾನು 2019ರಿಂದ ಗಂಗಾರತಿ ಮಾಡುತ್ತಿದ್ದೇನೆ. ನನಗೆ ಸಮಯ ಸಿಕ್ಕಾಗಲೆಲ್ಲ ಗಂಗಾರತಿ ಮಾಡಿದ್ದೇನೆ. ಮುಂದೆಯೂ ಗಂಗಾರತಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಗಂಗಾರತಿ ಮಾಡುವುದು ನನಗೆ ಸ್ಫೂರ್ತಿದಾಯಕ ಎನಿಸಿದೆ ಹಾಗೂ ಸತತವಾಗಿ ಓದಲು ಪ್ರೇರೇಪಿಸಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: NEET Result 2023 : ನೀಟ್‌ ಫಲಿತಾಂಶದ ಬೆನ್ನಲ್ಲೇ ಸಿಹಿ ಸುದ್ದಿ; ರಾಜ್ಯದ ಮೆಡಿಕಲ್‌ ಸೀಟುಗಳ ಸಂಖ್ಯೆ ಹೆಚ್ಚಳ

ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಗಂಗಾನದಿ ತೀರದಲ್ಲಿ ಮಾಡುವ ಗಂಗಾರತಿಯು ವಿಶ್ವಪ್ರಸಿದ್ಧಿಯಾಗಿದೆ. ಇತ್ತೀಚೆಗೆ, ವಾರಾಣಸಿಯಲ್ಲಿ ಜಿ-20 ಶೃಂಗಸಭೆ ನಡೆದಾಗಲೂ ಅದ್ಧೂರಿಯಾಗಿ ಗಂಗಾರತಿ ನೆರವೇರಿಸಲಾಗಿತ್ತು. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಕರ್ನಾಟಕದ ಧ್ರುವ್ ಅದ್ವಾನಿ ಈ ಪರೀಕ್ಷೆಯಲ್ಲಿ 5ನೇ ರ‍್ಯಾಂಕ್‌​ ಪಡೆದು ಸಾಧನೆ ಮಾಡಿದ್ದಾರೆ. ಇನ್ನು, ಪರೀಕ್ಷೆಯಲ್ಲಿ ತಮಿಳುನಾಡಿನ ಪ್ರಭಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ 720 ಕ್ಕೆ 720 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರಿಬ್ಬರು ಈ ಸಲದ ಮೊದಲ ರ‍್ಯಾಂಕ್‌​ ಹಂಚಿಕೊಂಡಿದ್ದಾರೆ. ಕರ್ನಾಟಕದ ಬೈರೇಶ್ ಎಸ್.ಎಚ್. 48ನೇ ರ‍್ಯಾಂಕ್‌​ ಪಡೆದಿದ್ದು, ಟಾಪ್ 50ರ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version