ನವ ದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಅವರು ಉಪರಾಷ್ಟ್ರಪತಿ ಚುನಾವಣೆಯಲ್ಲಿ (Vice President Election) ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿರುವ ನಿರೀಕ್ಷೆ ಇದೆ.
ಮಂಗಳೂರಲ್ಲಿ ಹುಟ್ಟಿ ಉತ್ತರ ಕನ್ನಡದ ಸಂಸದೆಯಾಗಿ, ಇಡೀ ದೇಶಾದ್ಯಂತ ತಮ್ಮ ಛಾಪನ್ನು ಒತ್ತಿದ ಈ ೮೦ ವರ್ಷದ ಹೋರಾಟಗಾರ್ತಿ ಜುಲೈ ೧೯ರಂದು ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅಂದೇ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಗಸ್ಟ್ ೬ರಂದು ಮತದಾನ ನಡೆಯಲಿದೆ. ಎನ್‌ಡಿಎ ಈಗಾಗಲೇ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಜಗದೀಪ್ ಧನಕರ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ.
ಗೆಲ್ಲುವುದು ಎನ್‌ಡಿಎ ಅಭ್ಯರ್ಥಿಯೆ
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಮತದಾರರಾಗಿರುತ್ತಾರೆ. ಎರಡೂ ಕಡೆಯಲ್ಲೂ ಎನ್‌ಡಿಎ ಪಾರಮ್ಯ ಹೊಂದಿರುವುದರಿಂದ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಗೆಲ್ಲುವುದು ಬಹುತೇಕ ಖಚಿತವಾಗಿದೆ.