ಚೆನ್ನೈ: ಹಿರಿಯ ನ್ಯಾಯವಾದಿ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ (Victoria Gowri) ಅವರನ್ನು ಮದ್ರಾಸ್ (Madras High count) ಹೈಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆಂಬ ಕಾರಣಕ್ಕೆ ಈ ನೇಮಕವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಅರ್ಜಿ ದಾಖಲಾಗಿತ್ತು. ಈ ಅರ್ಜಿಯನ್ನು ಕೋರ್ಟ್, ಮಂಗಳವಾರ ವಿಚಾರಣೆ ನಡೆಸುತ್ತಿದೆ. ಅತ್ತ ವಿಚಾರಣಾ ಪ್ರಕ್ರಿಯೆ ನಡೆಯುತ್ತಿರುವಾಗಲೇ, ಇತ್ತ ಗೌರಿ ಅವರು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ರಾಜಕೀಯ ಹಿನ್ನೆಲೆಯನ್ನು ಹೊಂದಿದವರು ನ್ಯಾಯಮೂರ್ತಿಯಾಗಿ ನೇಮಕವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥ ನೇಮಕಗಳು ನಡೆದಿವೆ. ಹಾಗಾಗಿ, ಈ ರಿಟ್ ಅರ್ಜಿಗೆ ತಾನು ಅವಕಾಶ ಕಲ್ಪಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಗೌರಿ ಅವರ ನೇಮಕಾತಿಯನ್ನು ಪ್ರಶ್ನಿಸಿ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಗೌರಿ ಅವರು ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆಂದು ಅವರು ತಿಳಿಸಿದ್ದರು. ಏತನ್ಮಧ್ಯೆ, ವಿಕ್ಟೋರಿಯಾ ಗೌರಿ ಅವರಿಗೆ ಸಂಬಂಧಿಸಿದಂತೆ ಶಿಫಾರಸನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕೊಲಿಜಿಯಂಗೆ ತಿಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Supreme Court: ಒಬ್ಬರು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆಯ ಬಗ್ಗೆ ಸಂಸತ್ ನಿರ್ಧರಿಸಲಿ ಎಂದ ಸುಪ್ರೀಂ ಕೋರ್ಟ್
ವಿಚಾರಣೆ ವೇಳೆ, ಗೌರಿ ಅವರು ಅಲ್ಪಸಂಖ್ಯಾತರ ವಿರುದ್ಧ ತಮ್ಮ ಅಸಹಿಷ್ಣುತೆಯನ್ನು ಹೊರಹಾಕಿದ್ದನ್ನು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದರು. ಈ ತರಹದ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿ ನ್ಯಾಯಮೂರ್ತಿಯಾದರೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬರಲಿದೆ. ಅವರು ಮುಸ್ಲಿಮ್, ಕ್ರೈಸ್ತರ ವಿರುದ್ಧ ನೀಡಿದ್ದ ಹೇಳಿಕೆಗಳು ಸಾರ್ವಜನಿಕವಾಗಿ ಲಭ್ಯ ಎಂದು ಅರ್ಜಿದಾರರು ಹೇಳಿದರು. ಆದರೂ, ಕೋರ್ಟ್ ರಾಜಕೀಯ ಹಿನ್ನೆಲೆಯ ಇರುವವರನ್ನು ಈ ಹಿಂದೆಯೂ ನೇಮಕ ಮಾಡಲಾಗಿದೆ ಎಂದು ಹೇಳಿತು.