ಅಗರ್ತಲ: ಅದು ಸಂಸತ್ ಇರಬಹುದು, ದೇಶದ ಯಾವುದೇ ರಾಜ್ಯದ ವಿಧಾನಸೌಧ ಇರಬಹುದು. ಅವುಗಳನ್ನು ಶಕ್ತಿಕೇಂದ್ರಗಳು ಎಂದು ಗುರುತಿಸಲಾಗುತ್ತದೆ. ದೇಶ ಅಥವಾ ರಾಜ್ಯದ ಅಭಿವೃದ್ಧಿಯ ಕೇಂದ್ರ ಸ್ಥಾನಗಳು ಎನ್ನಲಾಗುತ್ತದೆ. ಜನರಿಗೆ ತುಲುಪುವ ಸೌಲಭ್ಯಗಳು ವಿಧಾನಸೌಧಗಳಲ್ಲಿಯೇ ತೀರ್ಮಾನವಾಗುವ ಕಾರಣ ಅವುಗಳನ್ನು ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತದೆ. ಆದರೆ, ಇಂತಹ ಶಕ್ತಿಕೇಂದ್ರದಲ್ಲಿಯೇ ಕುಳಿತು ಬಿಜೆಪಿ ಶಾಸಕ ಜಾಧವ್ ಲಾಲ್ ನಾಥ್ (Jadav Lal Nath) ಅವರು ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸಿ ಈಗ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹೌದು, ತ್ರಿಪುರದ ಬಾಗ್ಬಸ ವಿಧಾನಸಭೆ ಕ್ಷೇತ್ರದ ಶಾಸಕ ಜಾಧವ್ ಲಾಲ್ ನಾಥ್ ಅವರು ವಿಧಾನಸಭೆಯಲ್ಲಿ ಕಲಾಪ ನಡೆಯುವಾಗಲೇ ಮೊಬೈಲ್‌ನಲ್ಲಿ ಬ್ಲ್ಯೂ ಫಿಲಂ ವೀಕ್ಷಿಸಿರುವ ವಿಡಿಯೊ ಈಗ ವೈರಲ್ ಆಗಿದೆ. ಮಾರ್ಚ್ 27ರಂದು ವಿಧಾನಸಭೆಯಲ್ಲಿ ಬಜೆಟ್ ಕುರಿತು ಗಂಭೀರವಾಗಿ ಚರ್ಚೆ ನಡೆಯುತ್ತಿರುವಾಗಲೇ ಆಡಳಿತಾರೂಢ ಮೈತ್ರಿಕೂಟದ ಶಾಸಕರೊಬ್ಬರು ಹೀಗೆ ಅಶ್ಲೀಲ ವಿಡಿಯೊಗಳನ್ನು ನೋಡುತ್ತ ಕುಳಿತಿರುವ ಕುರಿತು ಜನ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ವಿಡಿಯೊ
ಜಾಧವ್ ಲಾಲ್ ನಾಥ್ ಅವರು ಅಶ್ಲೀಲ ಚಿತ್ರ ನೋಡುತ್ತಿರುವ ವಿಡಿಯೊ ವೈರಲ್ ಆಗುತ್ತಲೇ ಜನ ವಿವಿಧ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಕುರಿತು ಚರ್ಚೆ ನಡೆಯುತ್ತಿರಬೇಕಾದರೆ, ಚರ್ಚೆಯಲ್ಲಿ ಭಾಗವಹಿಸುವುದಕ್ಕಿಂತ ಶಾಸಕರಿಗೆ ವಿಡಿಯೊ ನೋಡುವುದರಲ್ಲಿಯೇ ಆಸಕ್ತಿ ಜಾಸ್ತಿ ಇದೆ. ಇವರು ಸಂಸ್ಕಾರಿ ಶಾಸಕ” ಎಂಬುದಾಗಿ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಬರೀ ಶಾಸಕನಾ? ಅವರು ಸಚಿವರಾಗಲು ಅರ್ಹರು” ಎಂದು ವ್ಯಂಗ್ಯ ಮಾಡಿದ್ದಾರೆ.
ಕರ್ನಾಟಕದಲ್ಲೂ ನಡೆದಿತ್ತು ಇಂಥಾದ್ದೇ ಪ್ರಕರಣ
ಕರ್ನಾಟಕ ವಿಧಾನಸಭೆಯಲ್ಲೂ ಇಂಥಾದ್ದೇ ಪ್ರಕರಣ 2012ರಲ್ಲಿ ನಡೆದಿತ್ತು. ಆಗ ವಿಧಾನಸಭೆ ಸದಸ್ಯರಾಗಿದ್ದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಹಾಗೂ ಕೃಷ್ಣ ಪಾಲೆಮಾರ್ ಅವರು ಬ್ಲ್ಯೂ ಫಿಲಂ ನೋಡುವ ಮೂಲಕ ರಾಜ್ಯದ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಕೆಲ ದಿನಗಳ ಹಿಂದಷ್ಟೇ ಬಿಹಾರದ ಪಾಟ್ನಾ ರೈಲ್ವೆ ಸ್ಟೇಶನ್ನ 10ನೇ ಪ್ಲಾಟ್ಫಾರ್ಮ್ನಲ್ಲಿ ರೈಲಿಗಾಗಿ ಕಾಯುತ್ತ ಕುಳಿತ ನೂರಾರು ಪ್ರಯಾಣಿಕರು ತೀವ್ರ ಮುಜುಗರಕ್ಕೀಡಾದ ಸನ್ನಿವೇಶ ಎದುರಾಗಿತ್ತು. ಪ್ಲಾಟ್ಫಾರ್ಮ್ನಲ್ಲಿ ಅಳವಡಿಸಲಾಗಿದ್ದ ಟಿವಿಯಲ್ಲಿ ಒಮ್ಮೆಲೇ ಅಶ್ಲೀಲ ಸಿನಿಮಾದ ವಿಡಿಯೊ ಪ್ರದರ್ಶನವಾಗಿತ್ತು. ಅದೂ ಮೂರು ನಿಮಿಷಗಳ ಕಾಲ ಆ ಸೆಕ್ಸ್ ವಿಡಿಯೊ ಪ್ಲೇ ಆಗಿತ್ತು. ಟಿವಿ ಪರದೆ ಮೇಲೆ ಜಾಹೀರಾತು ಪ್ರಸಾರ ಆಗಬೇಕಿತ್ತು. ಅದರ ಬದಲಿಗೆ ಅಶ್ಲೀಲ ಸಿನಿಮಾ ಪ್ರದರ್ಶನಗೊಂಡಿದ್ದು ಪ್ರಯಾಣಿಕರೆಲ್ಲ ಒಮ್ಮೆ ಶಾಕ್ ಆಗಿದ್ದರು. ಈ ವಿಡಿಯೊ ಬ್ಲರ್ ಆದ ರೂಪದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗುತ್ತಿದೆ.