Site icon Vistara News

Vinesh Phogat: ನೋ! ನೋ! ನೋ!; ವಿನೇಶ್​ ಫೋಗಟ್ ಅನರ್ಹತೆ ಕೆಟ್ಟ ಕನಸಾಗಿರಲಿ: ಆನಂದ್‌ ಮಹೀಂದ್ರಾ

Vinesh Phogat

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​(Paris Olympics)ನ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ್ದ ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್ (Vinesh Phogat)​ ಅವರಿಗೆ ಆಘಾತ ಎದುರಾಗಿದೆ. ಅವರ ತೂಕ 100 ಗ್ರಾಂಗಿಂತ ಹೆಚ್ಚು ಇದ್ದ ಕಾರಣಕ್ಕೆ ಅವರನ್ನು ಫೈನಲ್​ನಿಂದ ಅನರ್ಹಗೊಳಿಸಲಾಗಿದೆ. ಈ ಮೂಲಕ ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ಬಹು ದೊಡ್ಡ ಶಾಕ್‌ ಎದುರಾಗಿದೆ. ಈ ಬಗ್ಗೆ ಹಲವರು ತಮ್ಮ ಆಘಾತ ವ್ಯಕ್ತಡಿಸಿದ್ದಾರೆ. ಖ್ಯಾತ ಉದ್ಯಮಿ ಆನಂದ್‌ ಮಹೀಂದ್ರಾ (Anand Mahindra) ಈ ಬಗ್ಗೆ ಪ್ರತಿಕ್ರಿಯಿಸಿ ಇದೊಂದು ಕೆಟ್ಟ ಕನಸಾಗಿರಲಿ ಎಂದು ಆಶಿಸಿದ್ದಾರೆ.

ʼʼನೋ ! ನೋ! ನೋ! ದಯವಿಟ್ಟು ಇದನ್ನು ಕೆಟ್ಟ ಕನಸನ್ನಾಗಿ ಮಾಡಿ. ನಾನು ಕನಸಿನಿಂದ ಎಚ್ಚರಗೊಳ್ಳುತ್ತೇನೆ ಮತ್ತು ಇದು ನಿಜವಲ್ಲ ಎನ್ನುವುದನ್ನು ಕಂಡುಕೊಳ್ಳುತ್ತೇನೆ” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ವಿಚಾರ ತಿಳಿದು ತಮ್ಮ ಆಘಾತ ವ್ಯಕ್ತಪಡಿಸಿದ್ದಾರೆ. “ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನಿಮಗೆ ಮಾತ್ರವಲ್ಲದೆ ಇಡೀ ದೇಶವಾಸಿಗಳಿಗೆ ನೋವು ತಂದಿದೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಬಲವಾಗಿ ಹಿಂತಿರುಗಿ! ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ” ಎಂದು ಮೋದಿ ಎಕ್ಸ್‌ ಮೂಲಕ ಸಾಂತ್ವನ ಹೇಳಿದ್ದಾರೆ.

ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿನೇಶ್ ಫೋಗಟ್ ಅನರ್ಹತೆಯನ್ನು ಖಚಿತಪಡಿಸಿದೆ. ವಿನೇಶ್ ಅವರು 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೆ ಅವರ ತೂಕ ನಿಗದಿತ ಮಿತಿಗಿಂತ ಹೆಚ್ಚಿರುವುದರಿಂದ ಅವರನ್ನು ಕುಸ್ತಿ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ನಾವು ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಗೆ ದೂರು ದಾಖಲಿಸಿದ್ದೇವೆ ಎಂದು ಭಾರತೀಯ ಒಲಿಂಪಿಕ್​​ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿನೇಶ್ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಈ ಹಿಂದೆ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೆ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ತಮ್ಮ ತೂಕವನ್ನು ಇಳಿಸಿದ್ದರು. ಸ್ಪರ್ಧೆಯ ಮೊದಲು ತೂಕ ತುಸು ಹೆಚ್ಚಿದ್ದರಿಂದ ಅವರು ಊಟವನ್ನು ಬಿಟ್ಟು, ವ್ಯಾಯಾಮ ಮಾಡಿ ಇಡೀ ರಾತ್ರಿ ಎಚ್ಚರವಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Vinesh Phogat: ಅನರ್ಹ ವಿನೇಶ್​ ಫೋಗತ್‌ಗೆ ಪ್ರಧಾನಿ ಮೋದಿ ಸಾಂತ್ವನ; ಮತ್ತಷ್ಟು ಬಲಿಷ್ಠರಾಗಿ ಮರಳಿ ಬನ್ನಿ ಎಂಬ ಹಾರೈಕೆ

ಮಂಗಳವಾರ ನಡೆದಿದ್ದ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿನೇಶ್ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಬಳಿಕ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೂರು ಬಾರಿಯ ಕಾಮನ್​ವೆಲ್ತ್​ ಚಿನ್ನದ ಪದಕ ವಿಜೇತೆ ಉಕ್ರೇನ್​ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್​ ಪ್ರವೇಶಿಸಿದ್ದರು.

Exit mobile version