ನವದೆಹಲಿ: ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಬೇಸರದಲ್ಲಿ ಕುಸ್ತಿಗೆ ವಿದಾಯ ಹೇಳಿದ್ದ ವಿನೇಶ್ ಪೋಗಟ್(Vinesh Phogat) ಇದೀಗ ರಾಜಕೀಯಕ್ಕೆ ಎಂಟ್ರಿ(Vinesh Phogat Join Politics) ಕೊಡಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ವಿನೇಶ್ ಫೋಗಟ್ ಮುಂಬರುವ ಹರಿಯಾಣ(Haryana Polls) ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಅವರ ನಿಕಟ ಮೂಲಗಳು ಮಂಗಳವಾರ ಐಎಎನ್‌ಎಸ್‌ಗೆ ತಿಳಿಸಿವೆ. ಆದರೆ, ಸಕ್ರಿಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ವಿನೇಶ್ ಈ ಹಿಂದೆಯೇ ಹೇಳಿದ್ದರು. ಆದರೆ, ಇತ್ತೀಚಿನ ವರದಿಯ ಪ್ರಕಾರ, ಕೆಲವು ರಾಜಕೀಯ ಪಕ್ಷಗಳು ವಿನೇಶ್ ಅವರನ್ನು ರಾಜಕೀಯಕ್ಕೆ ಬರುವಂತೆ ಮನವೊಲಿಸಲು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.
ವಿನೇಶ್ ಯಾವ ಪಕ್ಷ ಸೇರಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲವಾದರೂ, ಮೂಲಗಳ ಪ್ರಕಾರ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ. ವಿನೇಶ್ ಪ್ಯಾರಿಸ್ನಿಂದ ಭಾರತಕ್ಕೆ ಬಂದ ವೇಳೆ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಅವರು ಭರ್ಜರಿ ಸ್ವಾಗತ ಕೋರಿದ್ದರು. ಬಳಿಕ ತವರಿನಲ್ಲಿಯೂ ವಿನೇಶ್ಗೆ ಹಲವು ಕಾಂಗ್ರೆಸ್ ನಾಯಕರು ಮತ್ತು ರೈತ ನಾಯಕರು ಸನ್ಮಾನ ಮಾಡಿದ್ದರು.
ಮೂಲಗಳ ಪ್ರಕಾರ ಮಾಜಿ ಕಾಮನ್ವೆಲ್ತ್ ಗೇಮ್ ಚಿನ್ನದ ಪದಕ ವಿಜೇತೆ, ಬಿಜೆಪಿ ಪಕ್ಷದ ಕಾರ್ಯಕರ್ತೆ ಬಬಿತಾ ಫೋಗಟ್(Babita Phogat) ವಿರುದ್ಧ ವಿನೇಶ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ವಿನೇಶ್ ಮತ್ತು ಬಬಿತಾ ಸಹೋದರಿಗಳಾಗಿದ್ದಾರೆ. ವಿನೇಶ್ ಮಾತ್ರವಲ್ಲದೆ ಬಜರಂಗ್ ಪೂನಿಯಾ ಕೂಡ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ ಎನ್ನಲಾಗಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಚುನಾವಣಾ ಆಯೋಗವು ಕಳೆದ ಶುಕ್ರವಾರ ಚುನಾವಣೆ ದಿನಾಂಕ ಘೋಷಣೆ ಮಾಡಿತ್ತು. ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ Vinesh Phogat: ಸನ್ಮಾನ ಸಮಾರಂಭದಲ್ಲಿ ದಿಢೀರ್ ಪ್ರಜ್ಞೆ ತಪ್ಪಿ ಬಿದ್ದ ವಿನೇಶ್ ಪೋಗಟ್
ಬ್ರಿಜ್ ಭೂಷಣ್ ವಿರುದ್ಧದ ಪ್ರತಿಭಟನೆ ವೇಳೆ ವಿನೇಶ್ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ ತಮಗೆ ನೀಡಿದ್ದ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ತ್ಯಜಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಬಳಿಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಜತೆ ಕಾಣಿಸಿಕೊಂಡಿದ್ದರು. ಇದನೆಲ್ಲ ನೋಡುವಾಗ ಅವರು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಬ್ರಿಜ್ ಭೂಷಣ್ ವಿರುದ್ಧದ ಪ್ರತಿಭಟನೆ ವೇಳೆ ಟ್ವೀಟ್ ಮಾಡಿದ್ದ ಬಬಿತಾ “ಗೌರವಾನ್ವಿತ ಪ್ರಧಾನಿ ಮೋದಿ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿಯೂ ಸತ್ಯ ಹೊರಬರುತ್ತದೆ. ಒಬ್ಬ ಮಹಿಳಾ ಆಟಗಾರ್ತಿಯಾಗಿ ನಾನು ದೇಶದ ಎಲ್ಲ ಆಟಗಾರ್ತಿಯರ ಜತೆಗಿರುತ್ತೇನೆ, ಮುಂದೆಯೂ ಕೂಡ ಇರುತ್ತೇನೆ. ಆದರೆ ಸಾಕ್ಷಿ ಮತ್ತು ವಿನೇಶ್ ಈ ಪ್ರಕರಣದಲ್ಲಿ ಕಾಂಗ್ರೆಸ್ನ ಕೈಗೊಂಬೆಯಾಗಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದು ಹೇಳಿದ್ದರು.
“ನೀವು ಬಾದಾಮಿ ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ತಿನ್ನಬಹುದು, ಆದರೆ ನಾವು ನನ್ನ ದೇಶದ ಜನರು ಗೋಧಿಯಿಂದ ತಯಾರಿಸಿದ ಬ್ರೆಡ್ ಕೂಡ ತಿನ್ನುತ್ತೇವೆ. ನೀವು ಕಾಂಗ್ರೆಸ್ ಕೈಗೊಂಬೆಯಾಗಿದ್ದೀರಿ ಎಂದು ದೇಶದ ಜನರಿಗೆ ಅರ್ಥವಾಗಿದೆ. ನಿಮ್ಮ ನಿಜವಾದ ಉದ್ದೇಶವನ್ನು ಹೇಳಬೇಕಾದ ಸಮಯ ಬಂದಿದೆ” ಬಬಿತಾ ಫೋಗಟ್ ಹೇಳಿದ್ದರು.